ಬೆಂಗಳೂರು: ಆಮ್ ಆದ್ಮಿ ಪಕ್ಷದಿಂದ ಶುಕ್ರವಾರ ವಿನೂತನ ಪ್ರತಿಭಟನೆ

ಬೃಹತ್ ಬೆಂಗಳೂರಿನ ಬೃಹತ್ ಭ್ರಷ್ಟಾಚಾರದ ಸ್ಮಾರಕ- 2 ಆಮ್ ಆದ್ಮಿ ಪಕ್ಷದಿಂದ ಶುಕ್ರವಾರ ವಿನೂತನ ಪ್ರತಿಭಟನೆ

(Kannada News) : ಬೆಂಗಳೂರು : ಕೋರಂಮಗಲ 100 ಅಡಿ ಮುಖ್ಯರಸ್ತೆಯಿಂದ ಈಜೀಪುರ ಮುಖ್ಯರಸ್ತೆ – ಒಳವರ್ತುಲ ರಸ್ತೆ ಜಂಕ್ಷನ್ನಿಂದ ಕೇಂದ್ರಿಯ ಸದನ ಜಂಕ್ಷನ್ ತನಕ ನಿರ್ಮಾಣ ಮಾಡುತ್ತಿರುವ ಮೇಲ್ಸೇತುವೆ  ಕಾಮಗಾರಿ ಕಳೆದ 4 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಒತ್ತಾಯಿಸಿ ಕೋರಮಂಗಲ ನಿವಾಸಿಗಳ ಜೊತೆಗೂಡಿ ಇದೇ 18 ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಕೋರಮಂಗಲದ ಸೋನಿ ವರ್ಲ್ಡ್ ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡ ಡಾ.ರಾಧಾಕೃಷ್ಣ ಮಾಹಿತಿ ನೀಡಿದರು.

ಬುಧವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಹೀಗಾಗಲೇ ಶಿವಾನಂದ ಸರ್ಕಲ್ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ ಮಾಡಿದ್ದ ಎಎಪಿ. ಬೆಂಗಳೂರಿನ ತುಂಬ ಎಲ್ಲೆಲ್ಲಿ ಇಂತಹ ಸರ್ಕಾರಿ ನಿರ್ಮಿತ ಭ್ರಷ್ಟಾಚಾರದ ಸ್ಮಾಕಗಳು ಇವೆ ಎಂಬುದನ್ನು ಸರಣಿ ಪ್ರತಿಭಟನೆಗಳ ಮೂಲಕ ಜನರ ಗಮನಕ್ಕೆ ತರಲಿದೆ.

ಸಿಲಿಕಾನ್ ಸಿಟಿ ಬೆಂಗಳೂರಿಗೆ “ಬೃಹತ್ ಭ್ರಷ್ಟಾಚಾರ ಸ್ಮಾರಕಗಳ ನಗರ” ಎಂದು ಹೊಸದಾಗಿ ನಾಮಕರಣ ಮಾಡಲಾಗುವುದು ಎಂದು ಹೇಳಿದರು.

ರಾಜ್ಯ ರಾಜಧಾನಿ ಬೆಂಗಳೂರಿನ ತುಂಬಾ ಅರ್ಧಕ್ಕೆ ನಿಂತ ಮೇಲ್ಸೇತುವೆ ಕಾಮಗಾರಿ, ರಸ್ತೆ, ಚರಂಡಿ, ಪಾದಚಾರಿ ಮಾರ್ಗ, ವೈಟ್ ಟಾಪಿಂಗ್, ಮಳೆ ನೀರು ಕಾಲುವೆ, ರಾಜಕಾಲುವೆ ತಡೆಗೋಡೆಗಳು, ಕಟ್ಟಡಗಳೇ ತುಂಬಿ ಕೊಂಡಿವೆ ಇವನ್ನು ಸರ್ಕಾರಿ ನಿರ್ಮಿತ ಆಧುನಿಕ ಸ್ಮಾರಕಗಳನ್ನಾಗಿ ಉಳಿಸಿಕೊಂಡಿರುವ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ ನೂರಾರು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಅವುಗಳನ್ನು ಅರ್ಧಕ್ಕೆ ನಿಲ್ಲಿಸಿ ಜನರ ದುಡ್ಡನ್ನು ವೃಥಾ ಖರ್ಚು ಮಾಡಿ ನಗರವನ್ನು ನರಕ ಮಾಡಲಾಗಿದೆ.

ಕಾಮಗಾರಿಗಳನ್ನು ಸಕಾಲಕ್ಕೆ ಮುಗಿಸದೆ ಜನಸಾಮಾನ್ಯರನ್ನು ನಲುಗುವಂತೆ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳ ವೆಚ್ಚವನ್ನು ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಮಾಡುತ್ತಾ ತೆರಿಗೆ ದುಡ್ಡನ್ನು ಕಬಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಮಾಧ್ಯಮ ಸಂಯೋಜಕ ಸೋಮಶೇಖರ್ ಇದ್ದರು.

Web Title : Innovative protest from Aam Aadmi Party Bangalore on Friday