ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದ ವಿರುದ್ದ ಆಮ್ ಆದ್ಮಿ ಪಕ್ಷ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ

ಸೌದೆಗಾದ್ರೂ ಸಬ್ಸಿಡಿ ಕೊಡು ಗುರು ಎನ್ನುವ ಘೋಷಣೆ ಮೂಲಕ ಸೌದೆ ಒಲೆಯ ಮೇಲೆ ಟೀ ತಯಾರಿಸಿ ವಿನೂತನ ಪ್ರತಿಭಟನೆ

(Kannada News) : ಬೆಂಗಳೂರು : “ಸೌದೆಗಾದ್ರೂ ಸಬ್ಸಿಡಿ ಕೊಡು ಗುರು” ಎನ್ನುವ ಘೋಷವಾಕ್ಯಗಳನ್ನು ಕೂಗುತ್ತಾ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಕಾರ್ಯಕರ್ತರು ಶನಿವಾರ ಬೆಳಿಗ್ಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಸೌದೆ ಒಲೆಯಲ್ಲಿ ಟೀ ಮಾಡಿ ಹಂಚುವ ಮೂಲಕ ಪ್ರತಿಭಟನೆ ನಡೆಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ, ಡಿಸೆಂಬರ್ ತಿಂಗಳೊಂದರಲ್ಲೇ ಎರಡು ಬಾರಿ ಎಲ್‌ಪಿಜಿ ಸಿಲಿಂಡರ್ ದರವನ್ನು 100 ರೂಪಾಯಿಯಷ್ಟು ಹೆಚ್ಚಳ ಮಾಡಿ ಜನರ ಸುಲಿಗೆ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ದೋಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಾಕ್‌ಡೌನ್ ನೆಪ ಮಾಡಿಕೊಂಡು ಸಬ್ಸಿಡಿ ನೀಡುವುದನ್ನು ನಿಲ್ಲಿಸಿರುವ ಸರ್ಕಾರ ನೇರವಾಗಿ 20 ಸಾವಿರ ಕೋಟಿ ಉಳಿತಾಯ ಮಾಡಿದೆ ಆದರೂ ಬೆಲೆ ಹೆಚ್ಚಳ ಏಕೆ. ಮಾರುಕಟ್ಟೆಯಲ್ಲಿ ಸೌದೆಯ ಬೆಲೆಯೂ ಗಗನಕ್ಕೆ ಏರಿದೆ ಆದ ಕಾರಣ “ಸೌದೆಗಾದರೂ ಸಬ್ಸಿಡಿ ಕೊಡಿ” ಕನಿಷ್ಟ ಪಕ್ಷ ಎರಡು ಹೊತ್ತು ಊಟ ಮಾಡಿ ಜೀವ ಉಳಿಸಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದರು.

ಆಮ್ ಆದ್ಮಿ ಪಕ್ಷ ಮಹಿಳಾ ಘಟಕ
ಆಮ್ ಆದ್ಮಿ ಪಕ್ಷ ಮಹಿಳಾ ಘಟಕ

ಒಲೆಯಲ್ಲಿ ಅಡುಗೆ ಮಾಡುವುದರಿಂದ ಪರಿಸರ ಮಾಲಿನ್ಯ ತಪ್ಪಿಸಬಹುದು ಎಂದು ಹೇಳಿ ಗ್ಯಾಸ್ ವಿತರಿಸಿದ ಮೋದಿಯವರು ಈಗ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ. ರೈತ, ಕಾರ್ಮಿಕ, ಮಹಿಳಾ ವಿರೋಧಿಯಾದ ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಹೆಚ್ಚಳ ನಿರ್ಧಾರವನ್ನು ಹಿಂಪಡೆಯದಿದ್ದರೆ ಸೌದೆಯನ್ನು ಪ್ರಧಾನಿ ಕಚೇರಿಗೆ ಪಾರ್ಸಲ್ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ ಏನು ಎಂಬುದೇ ಅರ್ಥವಾಗುತ್ತಿಲ್ಲ, ಈ ದೇಶವನ್ನು ಸೂಪರ್ ಪವರ್ ಮಾಡುತ್ತೇವೆ ಎಂದು ಹೇಳುತ್ತಲೇ ಬಿಕಾರಿಗಳನ್ನಾಗಿ ಮಾಡುತ್ತಿದೆ, ಕಿಂಚಿತ್ತೂ ದೇಶ ಭಕ್ತಿ, ದೇಶದ ಜನ ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಜನರಿಂದ ಪ್ರಗತಿ ನಿರೀಕ್ಷಿಸಲು ಸಾಧ್ಯವೇ ಎಂದರು.

ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದ ವಿರುದ್ದ ಪ್ರತಿಭಟನೆ
ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದ ವಿರುದ್ದ ಪ್ರತಿಭಟನೆ

ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಹಿಳಾ ಘಟಕದ ಉಪಾಧ್ಯಕ್ಷರಾದ ಡಾ.‌ಮಾಯಾ ಪ್ರದೀಪ್, ವೈದ್ಯೆ ಪೂರ್ಣಿಮಾ ನಾಯ್ಡು, ಪ್ರತಿಮಾ ಮಲಾನಿ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಎಸ್. ವಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Web Title : protest by AAP’s women’s unit against LPG cylinder price hike