ಗ್ರಾಪಂ ಸದಸ್ಯ ಸ್ಥಾನ ಹರಾಜು ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆಯು ಮತದಾನದ ಮೂಲಕ ಪಾರದರ್ಶಕವಾಗಿ ನಡೆಯಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ

(Kannada News) : ಬೆಂಗಳೂರು ಗ್ರಾಮಾಂತರ : ಗ್ರಾಮ ಪಂಚಾಯಿತಿಗಳ ಸದಸ್ಯರುಗಳ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆಯು ಮತದಾನದ ಮೂಲಕ ಪಾರದರ್ಶಕವಾಗಿ ನಡೆಯಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಆಯ್ಕೆ ಪ್ರಕ್ರಿಯೆಯು ಹರಾಜು ಮೂಲಕ ನಡೆಯುತ್ತಿರುವ ಬಗ್ಗೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯನ್ನು ಭ್ರಷ್ಟಾಚಾರ ರಹಿತವಾಗಿ ನಡೆಸಿ ಪ್ರಜಾಪ್ರಭುತ್ವದ ಆಶಯವನ್ನು ಸಾರ್ವಜನಿಕರು ಯಶಸ್ವಿಗೊಳಿಸಬೇಕು.

ಜಿಲ್ಲೆಯ ಯಾವುದೇ ಗ್ರಾಮ ಪಂಚಾಯತಿಯ ಸದಸ್ಯ ಸ್ಥಾನಗಳಿಗೆ ಹರಾಜು ಮೂಲಕ ಆಯ್ಕೆ ಮಾಡುವುದಾಗಲಿ, ಹರಾಜು ಪ್ರಕ್ರಿಯೆಗೆ ಪ್ರಚೋದನೆ ನೀಡುವುದಾಗಲಿ, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಲೀ ಕಂಡು ಬಂದಲ್ಲಿ ಸಂಬಂಧ ಪಟ್ಟವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ತಾಲ್ಲೂಕು ಕಚೇರಿ ಅಥವಾ ಸ್ಥಳೀಯ ಆರಕ್ಷಕ ಠಾಣೆಯ ಗಮನಕ್ಕೆ ತರಬಹುದು.

ಯಾವುದೇ ಪುರಾವೆ ಇಲ್ಲದೆ ಗಾಳಿ ಮಾತುಗಳನ್ನಾಧರಿಸಿ ಊಹಾಪೋಹಗಳಿಂದ ಸುಳ್ಳು ಸುದ್ಧಿ ಹಬ್ಬಿಸಿದ್ದಲ್ಲಿ ಅಂತಹ ವ್ಯಕ್ತಿಗಳ ಅಥವಾ ಪ್ರತಿನಿಧಿಗಳ ಮೇಲೂ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Web Title : Strict action if a Gram Panchayat member Position is auctioned

Scroll Down To More News Today