ಹೋಂ ಐಸೋಲೇಶನ್‌ನಲ್ಲಿರುವವರ ಮೇಲೆ ನಿಗಾ

ಹೋಂ ಐಸೋಲೇಶನ್‌ನಲ್ಲಿರುವ ಕೋವಿಡ್-19 ಸೋಂಕಿತರ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಕ್ವಾರಂಟೈನ್ ವಾಚ್ ಆ್ಯಪ್‌ನಲ್ಲಿ ನಿಖರವಾಗಿ ಅಪ್ಲೋಡ್ ಮಾಡುವ ಮೂಲಕ ಅವರ ಮೇಲೆ ತೀವ್ರ ನಿಗಾ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

(Kannada News) : ಬೆಂಗಳೂರು ಗ್ರಾಮಾಂತರ: ಹೋಂ ಐಸೋಲೇಶನ್‌ನಲ್ಲಿರುವ ಕೋವಿಡ್-19 ಸೋಂಕಿತರ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಕ್ವಾರಂಟೈನ್ ವಾಚ್ ಆ್ಯಪ್‌ನಲ್ಲಿ ನಿಖರವಾಗಿ ಅಪ್ಲೋಡ್ ಮಾಡುವ ಮೂಲಕ ಅವರ ಮೇಲೆ ತೀವ್ರ ನಿಗಾ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಕುರಿತಾದ ಆ್ಯಪ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಒಟ್ಟು 103 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದು, ಇದರಲ್ಲಿ ಶೇ. 43 ರಷ್ಟು ಮಂದಿಯ ವಿವರವನ್ನು ಮಾತ್ರ ಕ್ವಾರಂಟೈನ್ ವಾಚ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಶೇಕಡ ನೂರರಷ್ಟು ಪ್ರಗತಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ನಗರ ವ್ಯಾಪ್ತಿಯಲ್ಲಿರುವ ಕೋವಿಡ್ ಸೋಂಕಿತರ ನಿರ್ದಿಷ್ಟ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಇಲ್ಲದಿರುವ ಕುರಿತು ಮಾಹಿತಿ ಬಂದಿರುವುದರಿಂದ ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ಗಂಟಲು ದ್ರವ ಪರೀಕ್ಷೆಗಳನ್ನು ಕೈಗೊಳ್ಳಲು ಗ್ರಾಮೀಣ ಪ್ರದೇಶಗಳಿಗೆ ತೆರಳುವ ಸಿಬ್ಬಂದಿಗಳಿಗೆ ವಾಹನ ಸಮಸ್ಯೆಯಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದಾಗ ಅಪರ ಜಿಲ್ಲಾಧಿಕಾರಿ ಅವರು ಮಾತನಾಡಿ ಜಿಲ್ಲಾ ಆರೋಗ್ಯ ಅಧಿಕಾರಿಯೊಂದಿಗೆ ಚರ್ಚಿಸಿ ಶೀಘ್ರವೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ಸುಮಾ, ಪುರಸಭೆ, ನಗರಸಭೆ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Web Title : Tracking on Home Isolation

Scroll Down To More News Today