ಬಂಡೀಪುರದಲ್ಲಿ ಜಿಂಕೆ ಬೇಟೆ: ಕೊಡಗಿನ ಬೇಟೆಗಾರರ ಬಂಧನ

ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ, ಮಾಂಸ ಮಾಡಿ ಅಡುಗೆ ಮಾಡಲು ತಯಾರಿ ನಡೆಸಿದ್ದ ಕೊಡಗಿನ ಆರು ಮಂದಿ ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಬಂಡೀಪುರ ವ್ಯಾಪ್ತಿಯ ಓಂಕಾರ್ ವಲಯದಲ್ಲಿ ಬಂಧಿಸಿದ್ದಾರೆ

ಬಂಡೀಪುರದಲ್ಲಿ ಜಿಂಕೆ ಬೇಟೆ: ಕೊಡಗಿನ ಬೇಟೆಗಾರರ ಬಂಧನ

(Kannada News) : ಗುಂಡ್ಲುಪೇಟೆ: ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ, ಮಾಂಸ ಮಾಡಿ ಅಡುಗೆ ಮಾಡಲು ತಯಾರಿ ನಡೆಸಿದ್ದ ಕೊಡಗಿನ ಆರು ಮಂದಿ ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಬಂಡೀಪುರ ವ್ಯಾಪ್ತಿಯ ಓಂಕಾರ್ ವಲಯದಲ್ಲಿ ಬಂಧಿಸಿದ್ದಾರೆ.

ಬಂಡೀಪುರ ಅರಣ್ಯ ವ್ಯಾಪ್ತಿಯ ಓಂಕಾರ್ ವಲಯದ ನಾಗಣಪುರ ೨ನೇ ಬ್ಲಾಕ್ ನ ಗಸ್ತಿನ ಅಂಚಿನಲ್ಲಿರುವ ಮಹೇಶ್ ಎನ್ನುವವರ ಜಮೀನಿನಲ್ಲಿ ಉರುಳು ಹಾಕಿ ಜಿಂಕೆ ಬೇಟೆಯಾಡಲು ಹೊಂಚು ಹಾಕಿ ಕುಳಿತಿದ್ದ ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ವಿದ್ಯಾಸಾಗರ್, ಬೆಟ್ಟದಹಳ್ಳಿ ಯಶೋಧರ, ತಲ್ತಾರೆ ಶೆಟ್ಟಳ್ಳಿಯ ಪ್ರಸನ್ನ ಹಾಗೂ ಸುಜಿತ್, ಶಾಂತಳ್ಳಿ ಕುಶಾಲಪ್ಪ ಅವರನ್ನು ಬಂಧಿಸಲಾಗಿದೆ.

ಮತ್ತೊಬ್ಬ ಆರೋಪಿ ನಂಜನಗೂಡು ತಾಲೂಕಿನ ಮಹೇಶ್ ತಲೆಮರೆಸಿಕೊಂಡಿದ್ದಾನೆ.

ಕೊಡಗಿನ ಬೇಟೆಗಾರರ ಬಂಧನ
ಕೊಡಗಿನ ಬೇಟೆಗಾರರ ಬಂಧನ

ಎರಡು ಒಂಟಿ ನಳಿಕೆ ಬಂದೂಕಿನಿಂದ ೩ ಜಿಂಕೆ ಹಾಗೂ ಉರುಳು ಹಾಕಿ ಒಂದು ಮೊಲವನ್ನು ಹತ್ಯೆ ಮಾಡಿದ್ದು, ಒಂದು ಜಿಂಕೆ ಚರ್ಮವನ್ನು ಸುಲಿದು ಅಡುಗೆ ಮಾಡಲು ತಯಾರಿ ನಡೆಸಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್ .ಆರ್. ನಟೇಶ್ ಮಾರ್ಗದರ್ಶನದಲ್ಲಿ ಓಂಕಾರ್ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್ ಹಾಗೂ ಎಸ್ ಟಿ ಪಿ ಎಫ್ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಎರಡು ಬಂದೂಕು ಹಾಗೂ ಒಂದು ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Web Title : Deer hunters arrested in Bandipur