ಲೈಂಗಿಕ ಕಿರುಕುಳ ತಾಳಲಾರದೆ ಬಾಲಕಿ ಆತ್ಮಹತ್ಯೆ, ಡೆತ್ ನೋಟ್ ಅಲ್ಲಿ ಆಕೆ ಏನು ಬರೆದಿದ್ದಾಳೆ ಗೊತ್ತಾ ?
ಲೈಂಗಿಕ ಕಿರುಕುಳ ತಾಳಲಾರದೆ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಮಿಳುನಾಡಿನ ಕರೂರಿನಲ್ಲಿ ಈ ಘಟನೆ ನಡೆದಿದೆ.
ಚೆನ್ನೈ: ಲೈಂಗಿಕ ಕಿರುಕುಳ ತಾಳಲಾರದೆ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಮಿಳುನಾಡಿನ ಕರೂರಿನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ 17 ವರ್ಷದ 12ನೇ ತರಗತಿಯ ಬಾಲಕಿ ಶಾಲೆಯಿಂದ ಮನೆಗೆ ಬಂದಿದ್ದಳು.
ತಾಯಿ ಮನೆಯಲ್ಲಿ ಇಲ್ಲದ ವೇಳೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಬಾಲಕಿ ಬಹಳ ಹೊತ್ತಾದರೂ ಮನೆಯಿಂದ ಹೊರಬರದ ಹಿನ್ನೆಲೆಯಲ್ಲಿ ನೆರೆಹೊರೆಯಲ್ಲಿದ್ದ ವೃದ್ಧೆ ಅನುಮಾನಗೊಂಡು ಮನೆಗೆ ತೆರಳಿ ನೋಡಿದಾಗ ಬಾಲಕಿ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಘಾತಗೊಂಡಿದ್ದಾರೆ.
ಕೂಡಲೇ ಆಕೆಯ ತಾಯಿ ಹಾಗೂ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಆಗಮಿಸಿ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದೇ ವೇಳೆ ಬಾಲಕಿ ಬರೆದಿರುವ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆತ್ಮಹತ್ಯೆ ಪತ್ರದಲ್ಲಿ…
‘ಲೈಂಗಿಕ ಕಿರುಕುಳದಿಂದ ಕರೂರ್ ಜಿಲ್ಲೆಯಲ್ಲಿ ಸಾಯುವ ಕೊನೆಯ ಹುಡುಗಿ ನಾನೇ ಆಗಬೇಕು. ನನ್ನ ನಿರ್ಧಾರದ ಕಾರಣವನ್ನು ಯಾರಿಗಾದರೂ ಹೇಳಲು ನಾನು ಹೆದರುತ್ತೇನೆ. ನಾನು ಈ ಭೂಮಿಯಲ್ಲಿ ಹೆಚ್ಚು ಕಾಲ ಬದುಕಲು ಮತ್ತು ಇತರರಿಗೆ ಸಹಾಯ ಮಾಡಲು ಬಯಸುತ್ತೇನೆ. ಆದರೆ ಈಗ ನಾನು ಇಷ್ಟು ಬೇಗ ಇಹಲೋಕ ತ್ಯಜಿಸಬೇಕಾಗಿದೆ… ಎಂದು ಹೇಳಿಕೊಂಡಿದ್ದಾಳೆ.
ಆಕೆ ತಮ್ಮ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತಿರುವುದಾಗಿ ಹಾಗೂ ಈ ಕಠಿಣ ಕ್ರಮ ಕೈಗೊಂಡಿದ್ದಕ್ಕಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾಳೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಎರಡನೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಇದಾಗಿದೆ. ಕೊಯಮತ್ತೂರಿನ 17 ವರ್ಷದ ಹುಡುಗಿ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶಾಲಾ ಶಿಕ್ಷಕರು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಳು.