ಮಹಾದೇವ ಸಾಹುಕಾರ ಕೊಲೆಗೆ ಯತ್ನ

ಗುಂಡು ಹಾರಿಸಿ ಪರಾರಿ, ಒಬ್ಬ ಸಹಚರ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ

( Kannada News Today ) : ಬಿಜಾಪುರ : ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್‌ನಿಂದ ಅಡ್ಡಗಟ್ಟಿ ಗುಂಡು ಹಾರಿಸಿದ ಘಟನೆ ಅರಕೇರಿ ಬಳಿ ನಡೆದಿದ್ದು, ಘಟನೆಯಿಂದಾಗಿ ಮಹಾದೇವ
ಸಾಹುಕಾರ ಭೈರಗೊಂಡ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ತೀವ್ರ ಗಾಯಗೊಂಡ ಮಹಾದೇವ ಸಾಹುಕಾರ ಭೈರಗೊಂಡನ ಇನ್ನೊಬ್ಬ ಸಹಚರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮಹಾದೇವ ಸಾಹುಕಾರ ಭೈರಗೊಂಡ ಅವರಿಗೆ ಎರಡು ಗುಂಡುಗಳು ತಗುಲಿವೆ ಎನ್ನಲಾಗಿದ್ದು, ಒಂದು ಗುಂಡು ಬಲಭುಜದ ಹಿಂಭಾಗಕ್ಕೆ ತಗುಲಿದ್ದು, ಇನ್ನೊಂದು ಗುಂಡು ಹೊಟ್ಟೆಗೆ ತಾಗಿ ಹೊರ ಹೋಗಿದೆ, ಇನ್ನೋರ್ವ ಸಹಚರ ಹುಸೇನಿ ಭಜಂತ್ರಿಗೆ ತಲೆಗೆ ಗುಂಡು ತಾಗಿದ್ದು, ಕಾರು ಚಲಾಯಿಸುತ್ತಿದ್ದ ಚಾಲಕನ ಕಾಲುಗಳಿಗೆ ಗಂಭೀರ
ಸ್ವರೂಪದ ಗಾಯಗಳಾಗಿವೆ. ಬಿಜಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂದು ಪುತ್ರಪ್ಪ – ಇಂದು ಮಹಾದೇವ

ಬಿಜಾಪುರದಲ್ಲಿ  ಮತ್ತೆ ಗುಂಡಿನ ಸದ್ದು ಮೊಳಗಿದೆ. ಅಂದು ಲೋಣಿ ಬಿಕೆ ಗ್ರಾಮದಲ್ಲಿ ೨೦೦೮ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮಹಾದೇವ ಸಾಹುಕಾರ ಭೈರಗೊಂಡ ಅವರ ಸಹೋದರ ಪುತ್ರಪ್ಪ ಸಾಹುಕಾರ ಭೈರಗೊಂಡ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.

ಪುತ್ರಪ್ಪ ಅವರ ನಂತರ ಅವರ ಸಹೋದರ ಮಹಾದೇವ ಸಾಹುಕಾರ ಮೇಲೆಯೂ ಈಗ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಗೆ ಹಳೆ ವೈಷ್ಯಮ್ಯವೇ ಕಾರಣವೋ ಅಥವಾ ಮರಳು ಮಾಫಿಯಾ ಕಾರಣವೋ ಎಂಬುದು ಇನ್ನೂ ಬಹಿರಂಗವಾಗಬೇಕಿದೆ.

ಚಡಚಣ ಹಾಗೂ ಭೈರಗೊಂಡ ಕುಟುಂಬಗಳ ಕೌಟುಂಬಿಕ ಕಲಹ ಮೂರನೇಯ ತಲೆಮಾರಿಗೂ ವ್ಯಾಪಿಸತ್ತು.

ಚಡಚಣ ನಕಲಿ ಎನಕೌಂಟರ್ ಪ್ರಕರಣ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಗಳಲ್ಲಿ ಮಹಾದೇವ ಭೈರಗೊಂಡ ಪ್ರಮುಖ ಆರೋಪಿಯಾಗಿದ್ದಾನೆ. ಕಳೆದ ೨೦೧೭ರ ಅಕ್ಟೋಬರ್ ೩೦ ರಂದು ಹಂತಕ ಧರ್ಮರಾಜ್ ಚಡಚಣನನ್ನು ಕೊಂಕಣಗಾಂವದಲ್ಲಿ ಪೊಲೀಸರು ಎನಕೌಂಟರ್ ಮಾಡಿದ್ದರು.

ಆನಂತರ ಈ ಎನಕೌಂಟರ್ ನಕಲಿ ಎಂದು ತಪ್ಪಿತಸ್ಥ ಪಿಎಸ್‌ಐ ಗೋಪಾಲ ಹಳ್ಳೂರ, ಆಗಿನ ಸಿಪಿಐ ಎಂ.ಬಿ. ಅಸೋಡೆ ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಮಹಾದೇವ ಸಾಹುಕಾರ ಪ್ರಮುಖ ಆರೋಪಿಯಾಗಿದ್ದಾನೆ. ಅದೇ ತೆರನಾಗಿ ಗಂಗಾಧರ ಚಡಚಣ ನಿಗೂಢ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿಯೂ ಮಹಾದೇವ ಸಾಹುಕಾರ ಪ್ರಮುಖ ಆರೋಪಿಯಾಗಿದ್ದಾನೆ. ಈ ಎರಡು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ.

ಏತನ್ಮಧ್ಯೆ ಈ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ, ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಧರ್ಮರಾಜ್ ಹಾಗೂ ಗಂಗಾಧರ ಚಡಚಣ ಅವರ ತಾಯಿ ವಿಮಲಾಬಾಯಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಜೊತೆಗೆ ವಿಧಾನಸೌದದ ಎದುರು ಧರಣಿ ಸಹ ನಡೆಸಿದ್ದರು.