Crime News: ಆಗ್ರಾದಲ್ಲಿ 60 ಸಾವಿರಕ್ಕೆ ಮಾರಾಟವಾದ ಅಪ್ರಾಪ್ತ ಬಾಲಕಿ, ಮುಂದೇನಾಯ್ತು?

ದೆಹಲಿಯಿಂದ ನಾಪತ್ತೆಯಾಗಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಬಾಲಕಿಯನ್ನು 60 ಸಾವಿರಕ್ಕೆ ಮಾರಾಟ ಮಾಡಲಾಗಿತ್ತು

ದೆಹಲಿಯ ಹೈದರ್‌ಪುರದ ಅಪ್ರಾಪ್ತ ಬಾಲಕಿ 16 ಸೆಪ್ಟೆಂಬರ್ 2021 ರಂದು ಕಾಣೆಯಾಗಿದ್ದಳು. ಪೊಲೀಸರ ತನಿಖೆಯಲ್ಲಿ, ಹುಡುಗಿಯನ್ನು ಆಗ್ರಾದಲ್ಲಿ ಮಾರಾಟ ಮಾಡಿ ರಾಜಸ್ಥಾನಕ್ಕೆ ಕಳುಹಿಸಿರುವುದು ಪತ್ತೆಯಾಗಿದೆ. ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹುಡುಗಿ ನಾಪತ್ತೆಯಾದ ನಂತರ ದೆಹಲಿಯ ಪಿಎಸ್ ಶಾಲಿಮಾರ್ ಬಾಗ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಹಲವಾರು ಪ್ರಯತ್ನಗಳ ಹೊರತಾಗಿಯೂ, ವಿಷಯದ ಯಾವುದೇ ಕುರುಹು ಕಂಡುಬಂದಿಲ್ಲ. ನಂತರ ಪೊಲೀಸ್ ತಂಡವು ಸಂತ್ರಸ್ತೆಯ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡಿತು. ಅವರ ಮನೆಯ ಸುತ್ತಮುತ್ತ ತನಿಖೆಗಳನ್ನು ನಡೆಸಲಾಯಿತು ಮತ್ತು ಪ್ರಮುಖ ಗುಪ್ತ ಮಾಹತಿಗಳನ್ನು ಸಂಗ್ರಹಿಸಲಾಯಿತು.

ವಿಚಾರಣೆ ವೇಳೆ, ಅಪ್ರಾಪ್ತ ಬಾಲಕಿಯು ಹೈದರ್‌ಪುರ್ ಹಳ್ಳಿಯ ನಿವಾಸಿ ನೀರಜ್ ಸೋಂಕರ್ ಎಂಬ ಸ್ಥಳೀಯ ಹುಡುಗನೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಮುಂದಿನ ತನಿಖೆಯಲ್ಲಿ ನೀರಜ್ ಸೋಂಕರ್ ಮತ್ತು ಇತರ ಆರೋಪಿ ಮುಸ್ಕಾನ್, ಸಂತ್ರಸ್ತೆಯನ್ನು ಆಗ್ರಾದಲ್ಲಿರುವ ತಮ್ಮ ಮೂರನೇ ಸಹಚರ ಶೀತಲ್ ಮನೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಶೀತಲ್ ನ ಸಹಾಯದಿಂದ ಆತ ಆ ಹುಡುಗಿಯನ್ನು ರಾಜಸ್ಥಾನದ ಸಿಕಾರ್ ನಿವಾಸಿ ಗೋಪಾಲ್ ಲಾಲ್ ಗೆ 60,000/-ರೂಗಳಿಗೆ ಮಾರಿದನು. ರಾಜಸ್ಥಾನದ ಸಿಕಾರ್ ನಿವಾಸಿಯಾದ ತನ್ನ ಸೋದರ ಮಾವ ಮದುವೆಯಾಗಲು ಹುಡುಗಿಯನ್ನು ಖರೀದಿಸಿದನೆನ್ನಲಾಗಿದೆ.

ಪೊಲೀಸ್ ತಂಡ ಮೊದಲು ಆಗ್ರಾ ಮತ್ತು ನಂತರ ರಾಜಸ್ಥಾನದ ಸಿಕಾರ್‌ಗೆ ಭೇಟಿ ನೀಡಿತು. ಹುಡುಗಿಯ ಸಹೋದರ ಕೂಡ ಪೊಲೀಸ್ ತಂಡದಲ್ಲಿದ್ದರು. ರಾಜಸ್ಥಾನದ ಸಿಕಾರ್ ನಲ್ಲಿರುವ ಗೋಪಾಲ್ ಲಾಲ್ ಮನೆಯಿಂದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದೆ.

ಗೋಪಾಲ್ ಲಾಲ್, ನೀರಜ್ ಸೋಂಕರ್ ಮತ್ತು ಸಂತ್ರಸ್ತೆಯನ್ನು ದೆಹಲಿಗೆ ಕರೆತರಲಾಯಿತು ಮತ್ತು ಶಾಲಿಮಾರ್ ಬಾಗ್ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಗೋಪಾಲ್ ಮತ್ತು ನೀರಜ್ ನನ್ನು ಬಂಧಿಸಲಾಗಿದ್ದು, ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದ ದನ್ವೀರ್ ಅಲಿಯಾಸ್ ದಾನಾ ತಲೆಮರೆಸಿಕೊಂಡಿದ್ದಾನೆ.