ಧಾರವಾಡದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಇರಾನಿ ಗ್ಯಾಂಗ್!

ಪೊಲೀಸರ ಮೇಲೆಯೇ ಇರಾನಿ ಗ್ಯಾಂಗ್ ಹಲ್ಲೆ ಮಾಡಿರುವ ಘಟನೆ ಧಾರವಾಡದ ಸಂಗಮ ಸರ್ಕಲ್ ಬಳಿ ಗುರುವಾರ ನಡೆದಿದೆ.

( Kannada News Today ) : ಧಾರವಾಡ : ಪೊಲೀಸರ ಮೇಲೆಯೇ ಇರಾನಿ ಗ್ಯಾಂಗ್ ಹಲ್ಲೆ ಮಾಡಿರುವ ಘಟನೆ ಧಾರವಾಡದ ಸಂಗಮ ಸರ್ಕಲ್ ಬಳಿ ಗುರುವಾರ ನಡೆದಿದೆ.

ಬೆಂಗಳೂರು ಮೂಲದ ನಾಲ್ಕು ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಫರ್ ಇರಾನಿ ಕಡೆಯವರನ್ನು ಹಿಡಿದು ನಿಲ್ಲಿಸಿದ್ದರು. ಆಗ ಇರಾನಿ ಗ್ಯಾಂಗಿನವರು ದಾಳಿ ಮಾಡಿ, ಪೊಲೀಸರನ್ನೇ ಮನ ಬಂದಂತೆ ಥಳಿಸಿದ್ದಾರೆ. ಇದರಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ.

ಘಟನೆ ತೀವ್ರ ಸ್ವರೂಪ ಪಡೆಯುತ್ತಿದಂತೆ ಸ್ಥಳೀಯ ಶಹರ ಠಾಣೆಯ ಪೊಲೀಸರು ಬಂದ ತಕ್ಷಣವೇ ಕೆಲವರು ಪರಾರಿಯಾಗಿದ್ದು, ಓರ್ವನನ್ನು ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

ಜಾಫರ್ ಇರಾನಿಯ ಮಕ್ಕಳನ್ನು ಬಂಧಿಸಲು ಬಂದಿದ್ದವರ ಮೇಲೆ ಹಲ್ಲೆ ನಡೆದಿದ್ದು, ಸಂಗಮ ವೃತ್ತದಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಶಹರ ಠಾಣೆಯ ಪೊಲೀಸರು, ಆಂಧ್ರ ಮೂಲದ ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನು ಹುಡುಕುವ ಪ್ರಯತ್ನಕ್ಕೆ ಇಳಿದಿದ್ದು, ಸಿಕ್ಕಿರುವ ಒಬ್ಬಾತನಿಂದ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ.

ಹಲ್ಲೆಗೊಳಗಾದವರು ಬೆಂಗಳೂರು ಪೊಲೀಸರು

ಧಾರವಾಡದ ಸಂಗಮ ವೃತ್ತದಲ್ಲಿ ಕಳ್ಳರನ್ನು ಹಿಡಿಯಲು ಬಂದ ವೇಳೆ ಇರಾನಿ ಗ್ಯಾಂಗ್‌ನವರಿಂದ ಹಲ್ಲೆಗೊಳಗಾದ ಪೊಲೀಸರು ಆಂಧ್ರ ಮೂಲದವರಲ್ಲ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಪೊಲೀಸರು ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಬಂದಿದ್ದ ಕಾಮಾಕ್ಷಿಪಾಳ್ಯ ಪಿಎಸ್‌ಐ ಸಂತೋಷ್ ಹಾಗೂ ಎಎಸ್‌ಐ ರವಿಕುಮಾರ್ ಅವರ ಮೇಲೆ ಇರಾನಿ ಗ್ಯಾಂಗ್‌ನವರು ಹಲ್ಲೆ ನಡೆಸಿದ್ದಾರೆ.

ಈ ತಂಡದಲ್ಲಿ ಒಟ್ಟು ನಾಲ್ಕು ಜನ ಪೊಲೀಸ್ ಸಿಬ್ಬಂದಿ ಇದ್ದರು. ಕಳ್ಳರನ್ನು ಹಿಡಿಯಲು ಹೋದಾಗ ಅವರು ತಪ್ಪಿಸಿಕೊಳ್ಳಲು ಮತ್ತೊಂದು ಗುಂಪು ಸಹಾಯ ಮಾಡಿದೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಶಹರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.