ಹಣ ಎಗರಿಸಿ ಪರಾರಿಯಾದ ಪೋಸ್ಟ್ ಮಾಸ್ಟರ್

Postmaster Grab The Money and Escaped from the village - Koppal News

ಕನ್ನಡ ನ್ಯೂಸ್ ಟುಡೇCrime News

ಕೊಪ್ಪಳ : ಬ್ಯಾಂಕ್‌ಗಳಿಂದ ಅಪಾರ ಪ್ರಮಾಣದಲ್ಲಿ ಸಾಲ ಎತ್ತಿ ಕೆಲವು ಉದ್ಯಮಿಗಳು ದೇಶ ಬಿಡುತ್ತಿರುವ ಹೊತ್ತಿನಲ್ಲೇ ಇಲ್ಲಿ ಪೋಸ್ಟ್ಮಾಸ್ಟರ್ ಒಬ್ಬ ಬಡವರ ಕೋಟ್ಯಾಂತರ ರೂ.ಗಳನ್ನು ಎಗರಿಸಿ ಪರಾರಿಯಾಗಿದ್ದಾನೆ.

ಅಂಚೆ ಇಲಾಖೆಯ ಉಳಿತಾಯ ಖಾತೆಗಳನ್ನು ನಂಬಿ ಹಣವಿಟ್ಟ ನೂರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಇಂದು ಸಂಕಷ್ಟಕ್ಕೆ ಒಳಗಾಗಿವೆ. ಜಿಲ್ಲೆಯ ಮಾದಿನೂರು ಗ್ರಾಮದ ಪೋಸ್ಟ್ ಮಾಸ್ಟರ್ ಪ್ರಸನ್ನ ಪುರೋಹಿತ್ ಬಡವರ ಉಳತಾಯದ ಹಣವನ್ನು ಎತ್ತಿಕೊಂಡು ಓಡಿ ಹೋಗಿದ್ದಾನೆ.

ಒಂದು ಪುಟ್ಟ ಪುಸ್ತಕದಲ್ಲಿ ಕೈಬರಹದಿಂದ ವಿವರಗಳನ್ನು ನಮೂದಿಸಿ, ಅಂಚೆ ಇಲಾಖೆಯ ಮೊಹರನ್ನೂ ಒತ್ತಲಾಗಿದೆ. ಈ ದಾಖಲೆ ಹಿಡಿದುಕೊಂಡ ಠೇವಣಿಗಾರರು ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿ ಹೋರಾಟ ಮಾಡಬೇಕಾಗಿದೆ.

ಹಳ್ಳಿ ಜನರ ಮುಗ್ಧತೆಯನ್ನು, ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡ ಪೋಸ್ಟ್ ಮಾಸ್ಟರ್, ಬಣ್ಣ ಬಣ್ಣದ ಮಾತು ಹೇಳಿ ಅಂಚೆ ಇಲಾಖೆಯಲ್ಲಿ ಹಣ ಹೂಡಿ, ಮುಂದೆ ಕಷ್ಟಕಾಲಕ್ಕೆ ಬರುತ್ತದೆ ಎಂದು ಮನವೊಲಿಸಿದ್ದಾನೆ. ಹಲವು ವರ್ಷಗಳಿಂದ ಈತನನ್ನು ಹತ್ತಿರದಿಂದ ನೋಡಿದ್ದ ಜನ ನಂಬಿ ಹೊಲ, ಹಸು, ಮೇಕೆ ಮಾರಿ ಬಂದ ಹಣವನ್ನು ಆತನ ಕೈಗೆ ಕೊಟ್ಟಿದ್ದಾರೆ. ಅಂಚೆ ಇಲಾಖೆಯ ಪಾಸ್ ಪುಸ್ತಕ ಕೊಡುವುದನ್ನು ಬಿಟ್ಟು ಕಿರಾಣಿ ಅಂಗಡಿಯಲ್ಲಿ ಬಳಸುವ ಸಣ್ಣ ಡೈರಿಯನ್ನು ಗ್ರಾಮಸ್ಥರಿಗೆ ನೀಡಿ, ಅದರಲ್ಲಿ ಕಾಟಾಚಾರಕ್ಕೆ ಅಂಚೆ ಇಲಾಖೆಯ ಮೊಹರು ಒತ್ತಿ ವಂಚಿಸಿ ಪರಾರಿಯಾಗಿದ್ದಾನೆ. ಪ್ರಸನ್ನನ ಈ ಹಗಲು ದರೋಡೆ ಪ್ರಕರಣ ಈಗ ಬಹಿರಂಗಗೊಂಡು ಆತನನ್ನು ಇಲಾಖೆ ಅಮಾನತು ಮಾಡಿದೆ.

ಆಗ ಎಚ್ಚೆತ್ತುಕೊಂಡ ಜನ ಹಣ ಮರುಪಾವತಿಸುವಂತೆ ದುಂಬಾಲು ಬಿದ್ದಿದ್ದಾರೆ. ಕೆಲವರಿಗೆ ಹಣ ವಾಪಾಸ್ ಕೊಟ್ಟಿರುವ ಪ್ರಸನ್ನ, ಇನ್ನು ಕೆಲವರಿಗೆ ಇವತ್ತು ಕೊಡ್ತೀನಿ, ನಾಳೆ ಕೊಡ್ತೀನಿ ಅಂತ ಕಾಗೆ ಹಾರಿಸಿ ಈಗ ಪರಾರಿಯಾಗಿದ್ದಾನೆ ಎಂದು ಮಾದಿನೂರು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಡಳಿತ ಈ ಕೂಡಲೇ ಗ್ರಾಮಸ್ಥರು ಹೂಡಿದ ಹಣವನ್ನೂ ಮರಳಿಸಲು ಕ್ರಮ ಕೈಗೊಳ್ಳಬೇಕು ಅಂತ ಹೋರಾಟಗಾರ ಡಿ.ಎಚ್. ಪೂಜಾರ ಒತ್ತಾಯಿಸಿದ್ದಾರೆ. ಈಚೆಗಷ್ಟೇ ಪೋಸ್ಟ್ಗಳನ್ನು ಹಂಚದೇ ಅಂಚೆಯಣ್ಣನೊಬ್ಬ ಜಿಲ್ಲೆಯ ಸಂಗನಹಾಳದಲ್ಲಿ ಸಿಕ್ಕಿ ಬಿದ್ದ ಘಟನೆ ಮಾಸುವ ಮುನ್ನವೇ ಈಗ ಅಂಚೆ ಇಲಾಖೆಯ ಮತ್ತೊಬ್ಬ ನೌಕರನ ಕರಾಳ ಮುಖ ಬಹಿರಂಗಗೊಂಡಿದೆ.////

Quick Links : Kannada Crime News | Karnataka Crime News