ಕೊಡಗಿನಲ್ಲಿ ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡೇಟಿಗೆ ಬಲಿ

ಬೇಟೆಯಾಡುವುದನ್ನು ನಿಷೇಧಿಸಿದ್ದರೂ ಕೊಡಗಿನಲ್ಲಿ ಅಕ್ರಮವಾಗಿ ಬೇಟೆಯಾಡುವುದು ನಡೆಯುತ್ತಲೇ ಇದ್ದು ಏನಾದರೂ ಪ್ರಾಣಹಾನಿ ಸಂಭವಿಸಿದಾಗ ಮಾತ್ರ ಇದು ಬೆಳಕಿಗೆ ಬರುತ್ತದೆ, ಈಗೆ ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡೇಟಿಗೆ ಬಲಿಯಾದ ಘಟನೆ ಕೊಡಗಿನಲ್ಲಿ ನಡೆದಿದೆ.

(Kannada News) : ಮಡಿಕೇರಿ: ಬೇಟೆಯಾಡುವುದನ್ನು ನಿಷೇಧಿಸಿದ್ದರೂ ಕೊಡಗಿನಲ್ಲಿ ಅಕ್ರಮವಾಗಿ ಬೇಟೆಯಾಡುವುದು ನಡೆಯುತ್ತಲೇ ಇದ್ದು ಏನಾದರೂ ಪ್ರಾಣಹಾನಿ ಸಂಭವಿಸಿದಾಗ ಮಾತ್ರ ಇದು ಬೆಳಕಿಗೆ ಬರುತ್ತದೆ.

ಬೇಟೆಗೆ ತೆರಳಿ ಅಲ್ಲಿ ಕಾಡುಪ್ರಾಣಿಗೆಂದು ಹೊಡೆದ ಗುಂಡು ಕೆಲವೊಮ್ಮೆ ಆಕಸ್ಮಿಕವಾಗಿ ಜತೆಗಿದ್ದವನಿಗೆ ತಗುಲಿ ಸಾವನ್ನಪ್ಪಿದ ಪ್ರಕರಣಗಳು ಬೇಕಾದಷ್ಟು ನಡೆದಿವೆ.

ಅಷ್ಟೇ ಅಲ್ಲದೆ ಬೇಟೆ ನೆಪದಲ್ಲಿ ಕರೆದೊಯ್ದು ಗುಂಡು ಹಾರಿಸಿ ಸಾಯಿಸಿರುವ ಪ್ರಕರಣಗಳಿಗೇನು ಕೊರತೆಯಿಲ್ಲ. ಇಲ್ಲಿ ಬೇಟೆಯಾಡುವುದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಬೇಟೆಗೆ ತೆರಳವುದು ನಿರಂತರವಾಗಿ ನಡೆಯುತ್ತಲೇ ಇದೆ.

ಇದೀಗ ಬೇಟೆಗೆ ತೆರಳಿದ್ದ ವೇಳೆ ವ್ಯಕ್ತಿಯೊಬ್ಬ ಗುಂಡೇಟಿಗೆ ಬಲಿಯಾಗಿರುವ ಘಟನೆಯೊಂದು ನಡೆದಿದೆ.

ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ನಿವಾಸಿ ಕೆ.ಹೆಚ್. ಪರಮೇಶ್ವರ್(ಕಿರಣ್) ಎಂಬಾತನೇ ಬೇಟೆಗೆ ತೆರಳಿದ ಸಂದರ್ಭ ಗುಂಡೇಟು ತಗುಲಿ ಪ್ರಾಣ ಬಿಟ್ಟ ದುರ್ದೈವಿ.

ಪರಮೇಶ್ವರ್ ಮತ್ತು ಅದೇ ಗ್ರಾಮದ ಬೆಳ್ಯಪ್ಪ ಎಂಬುವರು ಬೇಟೆಯಾಡಲು ಕಾಡಿಗೆ ತೆರಳಿದ್ದರು ಎಂದು ಹೇಳಲಾಗಿದ್ದು, ಈ ವೇಳೆ ಗುಂಡೇಟು ತಗುಲಿ ಪರಮೇಶ್ವರ್ ಪ್ರಾಣ ಬಿಟ್ಟಿದ್ದಾನೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಮೃತ ಪರಮೇಶ್ವರ್ ಸಹೋದರ ಕೀರ್ತಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ನನ್ನ ಸಹೋದರನನ್ನು ಬೆಳ್ಯಪ್ಪ ಬೇಟೆಗೆಂದು ಕರೆದೊಯ್ದು ಗುಂಡಿಕ್ಕಿ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದು, ಈ ಘಟನೆಯ ಸತ್ಯಾಸತ್ಯತೆ ಇನ್ನಷ್ಟೆ ತಿಳಿಯಬೇಕಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೇಟೆಯಾಡುವುದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಕದ್ದುಮುಚ್ಚಿ ಬೇಟೆಯಾಡುತ್ತಿರುವುದು ಜಿಲ್ಲೆಯಲ್ಲಿ ಕಂಡು ಬರುತ್ತಿದ್ದು,

ಇದರಿಂದ ಹಲವು ರೀತಿಯ ದುರ್ಘಟನೆಗಳು ನಡೆದಿದ್ದರೂ ಬೇಟೆಯನ್ನು ನಿಲ್ಲಿಸದಿರುವುದು ಬೇಸರದ ಸಂಗತಿಯಾಗಿದೆ. ಇನ್ನಾದರೂ ಬೇಟೆಯಾಡುವುದರ ವಿರುದ್ಧ ಸಂಬಂಧಿಸಿದವರು ಕಠಿಣ ಕ್ರಮ ಕೈಗೊಂಡು ಇಂತಹ ದುರ್ಘಟನೆಗಳು ನಡೆಯುವುದನ್ನು ತಡೆಯಬೇಕಿದೆ.

Web Title : The man was shot dead who had gone hunting in Kodagu