ನಂಜನಗೂಡಿನಲ್ಲಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನಲ್ಲಿ ನಡೆದಿದೆ

(Kannada News) : ಮೈಸೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಮೈಸೂರಿನ ವಿಜಯನಗರದ ನಿವಾಸಿ ಮಹದೇವಪ್ಪ ಎಂಬುವರ ಪತ್ನಿ ಸವಿತಾ (೪೮) ಎಂಬಾಕೆಯೇ ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಸವಿತಾ ಇತ್ತೀಚೆಗಿನ ದಿನಗಳಲ್ಲಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಈ ನಡುವೆ ನಂಜನಗೂಡು ತಾಲೂಕಿನ ಕಾಳಿಹುಂಡಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ಈಕೆ ಅವರ ಮನೆಯಲ್ಲಿ ಬಂಧುಗಳೊಂದಿಗೆ ಮಾತನಾಡಿಕೊಂಡು ಅಲ್ಲಿಂದ ಮೈಸೂರಿನ ತನ್ನ ಮನೆಗೆ ಹೋಗುವುದಾಗಿ ಹೇಳಿ ನಂಜನಗೂಡಿಗೆ ಬಂದಿದ್ದಾರೆ.

ಅಲ್ಲಿಂದ ಅವರು ನೇರವಾಗಿ ನಂಜುಂಡೇಶ್ವರ ದೇವಾಲಯದ ಹೆಜ್ಜಿಗೆ ಸೇತುವೆ ಬಳಿ ತೆರಳಿ ನೋಡ ನೋಡುತ್ತಿದ್ದಂತೆಯೇ ಕಪಿಲಾ ನದಿಗೆ ಹಾರಿದ್ದಾರೆ. ಇದನ್ನು ಕಂಡ ನದಿ ಬಳಿಯಲ್ಲಿದ್ದ ದೋಣಿ ಚಾಲಕ ಬದುಕಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶವದ ಮಹಜರು ನಡೆಸಿದ್ದಲ್ಲದೆ, ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಗಿದೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಿಳೆ ಸವಿತಾ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Web Title : Woman commits suicide by jumping into a river in Nanjangud