Welcome To Kannada News Today

ಪಂಜಾಬ್​ ಪೊಲೀಸರ ಮೇಲೆ ಹಲ್ಲೆ, ಕತ್ತರಿಸಿದ್ದ ಕೈ ಮರುಜೋಡಣೆ, ಕಿಡಿಗೇಡಿಗಳ ಬಂಧನ

11 persons were arrested for an attack on a police in Patiala

🌐 Kannada News :

ಪಟಿಯಾಲ : ಲಾಕ್​ಡೌನ್​ ಹಿನ್ನೆಲೆ ದೇಶಾದ್ಯಂತ ಅನಾವಶ್ಯಕವಾಗಿ ಸುತ್ತಾಡುವುದಕ್ಕೆ ಕತ್ತರಿ ಬಿದ್ದಿದೆ, ಮಹಾಮಾರಿ ಕೊರೋನಾ ನಿಗ್ರಹಕ್ಕೆ ವೈದ್ಯರು, ಪೊಲೀಸರು ಹಗಲಿರುಳೆನ್ನದೆ ಸೇವೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಜಾಲಿ ರೈಡ್ ಮಾಡುತ್ತಿದ್ದ ನಿಹಾಂಗ್ ಸಿಖ್ ಗುಂಪು ಪಾಸ್ ಕೇಳಿದ ಎಎಸ್​ಐ ಕೈಯನ್ನೇ ಕತ್ತರಿಸಿ ಪರಾರಿಯಾಗಿತ್ತು. ಸದ್ಯ ಎಎಸ್​ಐ ಕೈಯನ್ನು ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಜೋಡಿಸಲಾಗಿದ್ದು, ಕಿಡಿಗೇಡಿಗಳನ್ನು ಬಂಧಿಸಲಾಗಿದೆ.

ಭಾನುವಾರದ ದಿನದಂದು ಮುಂಜಾನೆ 6:15ಕ್ಕೆ ಪಟಿಯಾಲದ ಮಂಡಿ ಬೋರ್ಡ್​ ಬಳಿ ನಿಹಾಂಗ್ ಸಿಖ್ ಯುವಕರ ಕಾರನ್ನು ಅಡ್ಡಹಾಕಿದ ಪೊಲೀಸರು ಪಾಸ್ ತೋರಿಸುವಂತೆ ಕೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಯುವಕರು ಚೆಕ್​ಪೋಸ್ಟ್​​ ನ ಬ್ಯಾರಿಕೇಡ್ ಗೆ ಕಾರನ್ನು ಗುದ್ದಿದರು. ಕಾರನ್ನು ತಡೆಯಲು ಬಂದ ಎಎಸ್​ಐ​​ ಕೈಯನ್ನು ಮಚ್ಚಿನಿಂದ ಕತ್ತರಿಸಿ, ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ ಗುಂಪು ಅಲ್ಲಿಂದ ಪರಾರಿಯಾಗಿದ್ದರು.

ತಕ್ಷಣ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿದರು. ಸತತ ಏಳೂವರೆ ಗಂಟೆಗಳ ಕಾಲ ಚಿಕಿತ್ಸೆ ನೀಡಿ, ಆಪರೇಷನ್ ಮಾಡಿದ ವೈದ್ಯರು ಎಎಸ್​ಐ ಹರ್ಜೀತ್ ಸಿಂಗ್ ಅವರ ಕೈಯನ್ನು ಮರುಜೋಡಣೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಘಟನೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಮತ್ತು ವಿಶೇಷ ಕಾರ್ಯಾಚರಣೆ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಬಳಿಕ ಅವರು ಗುರುದ್ವಾರದಲ್ಲಿ ತಲೆಮರೆಸಿಕೊಂಡಿದ್ದರು.

ಆರೋಪಿಗಳಿದ್ದ ಸ್ಥಳವನ್ನು ಸುತ್ತುವರೆದ ಪೊಲೀಸರು ಶರಣಾಗುವಂತೆ ಮನವಿ ಮಾಡಿದಾಗ, ಮತ್ತೆ ಹಲ್ಲೆಕೋರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಎಲ್‌ಪಿಜಿ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಪೋಲೀಸರು ಚಾಣಾಕ್ಷತನದಿಂದ 11 ಹಲ್ಲೆಕೋರರನ್ನು ಬಂಧಿಸಿದ್ದಾರೆಂದು ಡಿಜಿಪಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತಲ್ವಾರ್, ಮೂರು ಪಿಸ್ತೂಲ್, ಪೆಟ್ರೋಲ್ ಬಾಂಬ್ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile