ಎರಡು ಎನ್ ಕೌಂಟರ್.. ನಾಲ್ವರು ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಎನ್ಕೌಂಟರ್ಗಳಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಎನ್ಕೌಂಟರ್ಗಳಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಶನಿವಾರ ಈ ಘಟನೆ ನಡೆದಿದೆ. ಶೋಪಿಯಾನ್ನಲ್ಲಿ ಹತರಾದ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾ (ಎಲ್ಇಟಿ)ಗೆ ಸೇರಿದವರಾಗಿದ್ದರೆ, ಪುಲ್ವಾಮಾದಲ್ಲಿ ಹತರಾದ ಉಗ್ರರನ್ನು ಇನ್ನೂ ಗುರುತಿಸಲಾಗಿಲ್ಲ. ಶೋಪಿಯಾನ್ನ ಬ್ರಾರಿಪೋರಾ ನಿವಾಸಿ ಸಜಾದ್ ಅಹ್ಮದ್ ಚಾಕ್, ಪುಲ್ವಾಮಾದ ಅಚಾನ್ ಲಿಟ್ಟರ್ನ ರಾಜಾ ಬಸಿತ್ ಯಾಕೂಬ್ ಮತ್ತು ಲಷ್ಕರ್-ಎ-ತೊಯ್ಬಾ ಉಗ್ರರು ಎಂದು ಗುರುತಿಸಲಾಗಿದೆ.
ಇವರಿಬ್ಬರು ಹಲವು ಭಯೋತ್ಪಾದಕ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಯುವಕರನ್ನು ಭಯೋತ್ಪಾದನೆಯತ್ತ ಪ್ರೇರೇಪಿಸುವ ಮತ್ತು ನೇಮಕಾತಿ ಮಾಡುವಲ್ಲಿ ಚಾಕ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು. ಇಬ್ಬರು ಉಗ್ರರಿಂದ ಎರಡು ಎಕೆ ಸಿರೀಸ್ ರೈಫಲ್ಗಳು, ನಾಲ್ಕು ಎಕೆ ಮ್ಯಾಗಜೀನ್ಗಳು, 32 ಸುತ್ತು ಮದ್ದುಗುಂಡುಗಳು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ಹರ್ದುಮೀರ್ನಲ್ಲಿ ಶನಿವಾರ ಎರಡನೇ ಎನ್ಕೌಂಟರ್ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಅಪರಿಚಿತ ಉಗ್ರರು ಹತರಾಗಿದ್ದಾರೆ. ಅವರ ಗುರುತು ಮತ್ತು ಅವರು ಯಾರಿಗೆ ಸೇರಿದವರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಭದ್ರತಾ ಪಡೆಗಳು ಶುಕ್ರವಾರ ಅನಂತನಾಗ್ ಜಿಲ್ಲೆಯಲ್ಲಿ ಪೊಲೀಸ್, ನಾಗರಿಕ ಮತ್ತು ಇತರರನ್ನು ಕೊಂದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಬಂಧಿಸಿವೆ.
Follow Us on : Google News | Facebook | Twitter | YouTube