“ಬಾಬಾ ಕಾ ಡಾಬಾ” ವೃದ್ಧ ದಂಪತಿ ಹೆಸರಲ್ಲಿ ಹಣ ದೋಚಿದರಾ ಯೂಟ್ಯೂಬರ್?

ಬಾಬಾ ಕಾ ಡಾಬಾ ನಡೆಸುತ್ತಿದ್ದ ವೃದ್ಧ ದಂಪತಿಗೆ ನೆರವು ನೀಡುವ ನೆಪದಲ್ಲಿ ಹಣ ವಸೂಲಿ ಮಾಡಿರುವ ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧ ಕಾಂತಪ್ರಸಾದ್ ಪೊಲೀಸರಿಗೆ ದೂರು

( Kannada News Today ) : ನವದೆಹಲಿ : ಬಾಬಾ ಕಾ ಡಾಬಾ ನಡೆಸುತ್ತಿದ್ದ ವೃದ್ಧ ದಂಪತಿಗೆ ನೆರವು ನೀಡುವ ನೆಪದಲ್ಲಿ ಹಣ ವಸೂಲಿ ಮಾಡಿರುವ ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧ ಕಾಂತಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ದಕ್ಷಿಣ ದೆಹಲಿಯ ಮಾಳ್ವಿಯಾ ನಗರದಲ್ಲಿ ಕಾಂತಪ್ರಸಾದ್ ‘ಬಾಬಾ ಕಾ ಡಾಬಾ’ ಎಂಬ ಹೋಟೆಲ್ ಇಟ್ಟುಕೊಂಡಿದ್ದರು.

ಕೊರೊನಾವೈರಸ್ ಆತಂಕದ ಹಿನ್ನೆಲೆ ಭಾರತ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ವೃದ್ಧ ದಂಪತಿ ನಡೆಸುತ್ತಿದ್ದ ಹೋಟೆಲ್ ನಲ್ಲಿ ವ್ಯಾಪಾರವಿಲ್ಲದೇ ಸಂಕಷ್ಟಕ್ಕೆ ಸಿಲುಕುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಾಂತಪ್ರಸಾದ್ ಮತ್ತು ಅವರ ಪತ್ನಿ ಎದುರಿಸುತ್ತಿದ್ದ ಪರಿಸ್ಥಿತಿ ಬಗ್ಗೆ ವಿಡಿಯೋ ಚಿತ್ರೀಕರಿಸಿದ ಯೂಟ್ಯೂಬರ್ ಗೌರವ್ ವಾಸನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವೃದ್ಧ ದಂಪತಿಗೆ ನೆರವು ನೀಡುವುದಾಗಿ ಹೇಳಿಕೊಂಡು ಸಾಕಷ್ಟು ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೋಸ, ವಂಚನೆ ಅಡಿ ಪ್ರಕರಣ ದಾಖಲು:

ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧ ಮೋಸ, ಕಿಡಿಗೇಡಿತನ, ನಂಬಿಕೆ ದ್ರೋಹ, ಕ್ರಿಮಿನಲ್ ಪಿತೂರಿ, ಹಣವನ್ನು ದುರುಪಯೋಗ ಸೇರಿದಂತೆ ಐಪಿಸಿಯ ಇತರೆ ಸಂಬಂಧಿತ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

“ಗೌರವ್ ವಾಸನ್ ಉದ್ದೇಶಪೂರ್ವಕವಾಗಿ ದಾನಿಗಳಿಗೆ ತಮ್ಮ ಮತ್ತು ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ತಮಗೆ ನೆರವು ನೀಡುವುದಾಗಿ ನಂಬಿಸಿ ದಾನಿಗಳಿಂದ ಹಲವು ವಿಧಾನಗಳಲ್ಲಿ ಸಾಕಷ್ಟು ಹಣವನ್ನು ಪಡೆದುಕೊಂಡಿದ್ದಾರೆ. ಯೂಟ್ಯೂಬರ್ ಗೌರವ್ ವಾಸನ್ ಅವರ ಬ್ಯಾಂಕ್ ಖಾತೆಯ ವಹಿವಾಟಿನ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ” ಎಂದು ಕಾಂತಪ್ರಸಾದ್ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಮಾಳ್ವಿಯಾ ನಗರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಪಡೆದುಕೊಂಡಿದ್ದೇವೆ. ಆರೋಪಕ್ಕೆ ಸಂಬಂಧಿಸಿದಂತೆ ಇಷ್ಟರಲ್ಲೇ ತನಿಖೆ ಆರಂಭಿಸಲಾಗುತ್ತಿದ್ದು, ಈವರೆಗೂ ಎಫ್‌ಐಆರ್ ದಾಖಲಾಗಿಲ್ಲ ಎಂದು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.

Scroll Down To More News Today