ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚಲು ಸರ್ಕಾರ ನಿರ್ಧಾರ !

ಹದಗೆಡುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಸೋಮವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚಲು ರಾಜ್ಯ ಸರಕಾರ ನಿರ್ಧರಿಸಿದೆ.

ನವದೆಹಲಿ: ಹದಗೆಡುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಸೋಮವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚಲು ರಾಜ್ಯ ಸರಕಾರ ನಿರ್ಧರಿಸಿದೆ.

ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ. ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡಿವೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ದೆಹಲಿಯಲ್ಲಿ ಹಲವು ದಿನಗಳಿಂದ ಮಾಲಿನ್ಯ ಹೆಚ್ಚಾಗಿರುವುದರಿಂದ ಶಾಲೆಗಳು ಮತ್ತು ಕಚೇರಿಗಳನ್ನು ಸೋಮವಾರದಿಂದ ಮುಚ್ಚಲಾಗುವುದು. ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ಸರ್ಕಾರಿ ಕಚೇರಿಗಳನ್ನು ಮನೆಯಿಂದಲೇ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ವಾರದ ದಿನಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದಿದ್ದಾರೆ.

ನಗರದಲ್ಲಿ ಮಾಲಿನ್ಯ ಪರಿಸ್ಥಿತಿ ಹೆಚ್ಚು ಶೋಚನೀಯವಾಗಿದ್ದರೆ ಪೂರ್ಣ ಪ್ರಮಾಣದ ಲಾಕ್‌ಡೌನ್ ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದು, ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಾಗುವುದು ಎಂದರು. ಒಂದು ವೇಳೆ ಪೂರ್ಣ ಪ್ರಮಾಣದ ಲಾಕ್‌ಡೌನ್ ಹೇರಿದರೆ ಕಟ್ಟಡ ನಿರ್ಮಾಣ ಹಾಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಹೇಳಿದರು.

ಮಾಲಿನ್ಯ ಸಮಸ್ಯೆಯನ್ನು ನಿಭಾಯಿಸಲು ದೀರ್ಘಾವಧಿಯ ಪ್ರಯತ್ನಗಳಿಗಿಂತ ತಕ್ಷಣದ ಮತ್ತು ತುರ್ತು ಪ್ರತಿಕ್ರಿಯೆಗೆ ಆದ್ಯತೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ಬಲವಾಗಿ ಒತ್ತಾಯಿಸಿದೆ. ಈ ಬಗ್ಗೆ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. ಲಾಕ್‌ಡೌನ್ ಹೇರುವ ಬಗ್ಗೆಯೂ ಯೋಚಿಸುತ್ತಿರುವುದಾಗಿ ಅವರು ಹೇಳಿದರು.