1368 ಕೋಟಿ ಮೌಲ್ಯದ 55908 ಎಕರೆ ಜಮೀನು ಹಂಚಿಕೆ ಭೂ ಒಡೆತನ ಯೋಜನೆ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ವಿವಿಧ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಭೂ ಒಡೆತನ ಯೋಜನೆಯಲ್ಲಿ ಸಣ್ಣ-ಪುಟ್ಟ ಲೋಪದೋಷಗಳಿದ್ದು,ಅವುಗಳನ್ನು ಸರಿಪಡಿಸಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ

Online News Today Team

ಬೆಳಗಾವಿ ಸುವರ್ಣಸೌಧ, ಡಿ.17 : ವಿವಿಧ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಭೂ ಒಡೆತನ ಯೋಜನೆಯಲ್ಲಿ ಸಣ್ಣ-ಪುಟ್ಟ ಲೋಪದೋಷಗಳಿದ್ದು,ಅವುಗಳನ್ನು ಸರಿಪಡಿಸಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಸಮಾಜಕಲ್ಯಾಣ ಸಚಿವರು ಆಗಿರುವ ಸಭಾನಾಯಕ ಕೋಟಶ್ರೀನಿವಾಸ ಪೂಜಾರಿ ಅವರು ಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಭೂ ಒಡೆತನ ಯೋಜನೆಯು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ 1990-91ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೆ 1368 ಕೋಟಿ ರೂ.ಮೌಲ್ಯದ 55908 ಎಕರೆ ಜಮೀನನ್ನು 48 ಸಾವಿರ ಜನರಿಗೆ ಹಂಚಿಕೆ ಮಾಡಲಾಗಿದೆ ಎಂದರು.

ರಾಯಚೂರು ಜಿಲ್ಲೆಯಲ್ಲಿ 53 ಮತ್ತು ಮಂಡ್ಯ ಜಿಲ್ಲೆಯಲ್ಲಿ 2 ಜನರಿಗೆ ಹಂಚಿಕೆಯಾದ ಜಮೀನು ಸಿಗದೇ ಮೊದಲಿನ ಭೂಮಾಲೀಕರೇ ಇಂದಿಗೂ ವ್ಯವಸಾಯ ಮಾಡುತ್ತಾ ಬದುಕು ಸಾಗಿಸುತ್ತಿರುವುದು ಗಮನಕ್ಕೆ ಬಂದ ತಕ್ಷಣ ಅದನ್ನು ಸರಿಪಡಿಸಿ ಫಲಾನುಭವಿಗಳಿಗೆ ಒದಗಿಸಲಾಗಿದೆ.

ಈ ರೀತಿಯ ಘಟನೆಗಳು ಕಂಡುಬಂದಲ್ಲಿ ಅಂತವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎರಡು ತಿಂಗಳ ಈಚೆಗೆ ಪ್ರತಿ ಜಿಲ್ಲೆಯಲ್ಲಿ ಭೂಒಡೆತನಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಮಾಡಲು ಮತ್ತು ವಿಶೇಷ ಸಭೆಗಳನ್ನು ಕರೆಯಲು ಸೂಚಿಸಲಾಗಿದೆ ಎಂದು ವಿವರಿಸಿದರು.

ಸದಸ್ಯ ನಾರಾಯಣಸ್ವಾಮಿ ಅವರು ಈ ಯೋಜನೆಯನ್ನು ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ;ಇತ್ತೀಚೆಗೆ ಎಸಿಬಿ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕಂಡುಬಂದ ದಾಖಲೆಗಳೇ ಸಾಕ್ಷಿ ಎಂದು ಆರೋಪಿಸಿದಕ್ಕೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಣ್ಣ-ಪುಟ್ಟ ಲೋಪದೋಷಗಳಿರುವುದು ಗಮನಕ್ಕಿದ್ದು, ಅಧಿವೇಶನ ಮುಗಿದ ತಕ್ಷಣ ವಿಶೇಷ ಸಭೆ ಕರೆದು ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

Follow Us on : Google News | Facebook | Twitter | YouTube