ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ನಿವೇಶನ ಹಂಚಿಕೆಗಾಗಿ 1,158 ಎಕರೆ ಜಮೀನು ಮಂಜೂರು

ನಿವೇಶನ ಹಂಚಿಕೆಗಾಗಿ 1,158 ಎಕರೆ ಜಮೀನು ಮಂಜೂರು ಮಾಡುವ ಮೂಲಕ ರಾಜ್ಯದಲ್ಲಿಯೇ ದಾಖಲೆ ನಿರ್ಮಿಸಿದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ

  • ನಿವೇಶನಕ್ಕಾಗಿ 1,158 ಎಕರೆ, ಇತರ ಉದ್ದೇಶಗಳಿಗಾಗಿ 564 ಎಕರೆ ಸೇರಿದಂತೆ ಒಟ್ಟಾರೆ 1,722 ಎಕರೆ ಜಮೀನು ಜಿಲ್ಲಾಡಳಿತದಿಂದ ಮಂಜೂರು

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಆಶ್ರಯ ವಸತಿ ಯೋಜನೆಯಡಿ ನಿವೇಶನ ಹಂಚಿಕೆಗಾಗಿ 1,158 ಎಕರೆ ಮತ್ತು ಇತರ ಕಾಮಗಾರಿಗಳ ನಿರ್ಮಾಣದ ಉದ್ದೇಶಗಳಿಗಾಗಿ 564 ಎಕರೆ ಸೇರಿದಂತೆ ಒಟ್ಟು 1,722 ಎಕರೆ ಜಮೀನನ್ನು ಕಳೆದೆರಡು ವರ್ಷಗಳಲ್ಲಿ ಜಿಲ್ಲಾಡಳಿತ ಮಂಜೂರು ಮಾಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶವನ್ನು ಒಳಗೊಂಡಂತೆ ಕಳೆದ 2 ವರ್ಷಗಳಲ್ಲಿ 1,158 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿದ್ದು, ಸದರಿ ಜಮೀನಿನಲ್ಲಿ 50 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಬಹುದಾಗಿದೆ. ಇಷ್ಟು ಅಗಾದ ಪ್ರಮಾಣದ ಜಮೀನನ್ನು ಕಳೆದ 2 ವರ್ಷಗಳ ಕೋವಿಡ್ ಸಂಕಷ್ಟದ ಸಂಧಿಗ್ದತೆಯ ನಡುವೆಯೇ ಮಂಜೂರು ಮಾಡಿರುವುದು ಜಿಲ್ಲಾಡಳಿತದ ಉತ್ತಮ ಕಾರ್ಯ ವೈಖರಿಗೆ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.

10 ಸಾವಿರಕ್ಕೂ ಹೆಚ್ಚು ನಿವೇಶನಗಳಿಗೆ ಬಡಾವಣೆ ರಚನೆ

ಈ ಎಲ್ಲಾ ಜಮೀನನ್ನು ಜಿಲ್ಲಾಡಳಿತ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಸಹಯೋಗದಲ್ಲಿ ಬಡಾವಣೆಗಳನ್ನಾಗಿ ಅಭಿವೃದ್ಧಿಪಡಿಸಿ, ನಿವೇಶನಗಳನ್ನು ವಿತರಿಸುವ ಕಾರ್ಯವು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚಿನ ನಿವೇಶನಗಳಿಗಾಗಿ ಬಡಾವಣೆ ರಚಿಸಲಾಗಿದೆ. ಉಳಿದ ನಿವೇಶನಗಳಿಗಾಗಿ ಬಡಾವಣೆ ರಚಿಸುವ ಕಾರ್ಯುವು ಸಹ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಈ ಕಾರ್ಯವು ಇನ್ಮುಂದೆ ಹೆಚ್ಚಿನ ವೇಗ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ನಿವೇಶನ ಹಂಚಿಕೆಗಾಗಿ 1,158 ಎಕರೆ ಜಮೀನು ಮಂಜೂರು - Kannada News

ನಿವೇಶನ ವಿತರಿಸುವ ಕಾರ್ಯವನ್ನು ಅಭಿಯಾನದ ರೀತಿಯಲ್ಲಿ ಜಿಲ್ಲಾಡಳಿತ ಕೈಗೊಳ್ಳುತ್ತಿದ್ದು, ಈ ಕಾರ್ಯಕ್ಕಾಗಿ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಯ ಪರಿಶ್ರಮದಿಂದ ವಸತಿ ಯೋಗ್ಯ ಜಮೀನನ್ನು ಜಿಲ್ಲೆಯಾದ್ಯಂತ ಗುರುತಿಸಿ ಅಗತ್ಯತೆಗನುಗುಣವಾಗಿ ಜಮೀನನ್ನು ಮಂಜೂರು ಮಾಡಲಾಗಿದೆ. ಕಳೆದ ವರ್ಷವೇ ಈ ಎಲ್ಲಾ ಕಾರ್ಯಗಳ ಪೂರ್ವ ತಯಾರಿ ಮಾಡಿಕೊಂಡಿದ್ದು, ಪ್ರಸ್ತುತ ನಿವೇಶನ ವಿತರಣಾ ಕಾರ್ಯ ಸನಿಹದಲ್ಲೇ ಬೃಹತ್ ಪ್ರಮಾಣದಲ್ಲಿ ಆಗಲಿದೆ ಎಂದು ತಿಳಿಸಿದರು.

ಒಟ್ಟು 50,000 ನಿವೇಶನ ವಿತರಿಸುವ ಗುರಿ

ಪ್ರಾಣಿ ಪಕ್ಷಿಗಳು ಸಹ ಒಂದು ಗೂಡನ್ನ ಮಾಡಿಕೊಂಡಿರುತ್ತವೆ ಅಂತದ್ದರಲ್ಲಿ ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದು ಸೂರನ್ನು ಹೊಂದುವ ಆಸೆ ಇದ್ದೆ ಇರುತ್ತದೆ. ಆಶ್ರಯ ಯೋಜನೆಯಡಿ ಒಂದು ನಿವೇಶನ ನೀಡಿದರೆ ಎಲ್ಲರೂ ಒಂದು ಸೂರು ಹೊಂದಲು ಸಹಾಯ ಆಗಲಿದೆ. ಆದ್ದರಿಂದ ನಿವೇಶನರಹಿತ ಎಲ್ಲರಿಗೂ 30*20 ಅಳತೆಯ ನಿವೇಶನಗಳನ್ನು ನೀಡುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ.

ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸು.40,000 ಕ್ಕೂ ಹೆಚ್ಚು ಮತ್ತು ನಗರ ವ್ಯಾಪ್ತಿಯಲ್ಲಿ ಸು.10,000 ಕ್ಕೂ ಹೆಚ್ಚು ಒಟ್ಟು 50,000 ಕ್ಕೂ ಹೆಚ್ಚು ನಿವೇಶನಗಳನ್ನು ಜಿಲ್ಲೆಯ ನಿವೇಶನರಹಿತರಿಗೆ ನೀಡಲು ಗುರಿ ನಿಗದಿಪಡಿಸಿಕೊಂಡು ರೂಪುರೇಷೆಯನ್ನು ಸಿದ್ದಪಡಿಸಲಾಗಿದೆ. ಸದ್ಯದಲ್ಲೆ ನಿವೇಶನ ಹಂಚಿಕೆ ಮಾಡುವ ಕಾರ್ಯ ಮುಂದಿನ 3 ತಿಂಗಳಲ್ಲಿ ಅಭಿಯಾನದ ರೀತಿಯಲ್ಲಿ ಜರುಗಲಿದೆ ಎಂದರು.

ಪೋಲಾಗ ಕೂಡದು

ಜಿಲ್ಲೆಯಲ್ಲಿ ಯಾರೂ ಸಹ ನಿವೇಶನರಹಿತರಾಗಿ ಹಾಗೂ ವಸತಿರಹಿತರಾಗಿ ಇರಬಾರದು ಎಂಬ ಸದುದ್ದೇಶದಿಂದ ಆಶ್ರಯ ಯೋಜನೆಯನ್ನು ಜಾರಿಗೊಳಿಸಿದೆ ಅದರಂತೆ ಯೋಜನೆಯ ಸದುದ್ದೇಶಕ್ಕೆ ಜಿಲ್ಲಾಡಳಿತದಿಂದ ನಿವೇಶನರಹಿತರಿಗೆ ನಿವೇಶನ ನೀಡಲು ಮಂಜೂರು ಮಾಡಿ ಗುರುತಿಸಿರುವ ಜಮೀನಿನಲ್ಲಿ ಒಂದಿಂಚು ಕೂಡ ಯಾರು ಒತ್ತುವರಿ ಮಾಡದಂತೆ ಹಾಗೂ ನೀಲ ನಕ್ಷೆ ಸಿದ್ಧಪಡಿಸುವಾಗ ಜಾಗ ಪೋಲಾಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮವಹಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ದಾಖಲೆಯಾಗಲಿದೆ

ಗ್ರಾಮೀಣ ಮತ್ತು ನಗರ ಪ್ರದೇಶಗಳು ಸೇರಿದಂತೆ 50,000 ಕ್ಕೂ ಹೆಚ್ಚು ನಿವೇಶನಗಳ ಹಂಚಿಕೆಗಾಗಿ ಜಿಲ್ಲಾಡಳಿತ ಜಮೀನು ಮಂಜೂರು ಮಾಡಿರುವುದು ರಾಜ್ಯದಲ್ಲಿಯೇ ಈಗಾಗಲೇ ದಾಖಲೆಯಾಗಿದೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಹಾಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ನಾಗರಾಜು (ಎಂಟಿಬಿ) ಅವರಿಗೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಧನ್ಯವಾದ ತಿಳಿಸಿದರು.

ಯೊಜಿಸಿದಂತೆ ನಿವೇಶನಗಳು ಹಂಚಿಕೆಯಾದಲ್ಲಿ ರಾಜ್ಯದಲ್ಲಿಯೇ ಇದೊಂದು ದಾಖಲೆಯ ಮೈಲಿಗಲ್ಲಾಗಲಿದೆ, ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಗಳಿಸಲಿದೆ. ಜಿಲ್ಲೆಯ ಮಟ್ಟಿಗೆ ಹಿಂದೆಂದು ಇಷ್ಟೊಂದು ಪ್ರಮಾಣದಲ್ಲಿ ನಿವೇಶನಗಳ ಹಂಚಿಕೆ ಕಾರ್ಯ ನಡೆದಿಲ್ಲ ಎಂದು ಮಾಹಿತಿ ನೀಡಿದರು.

ಜನಪ್ರತಿನಿಧಿಗಳ ಸಮ್ಮುಖದಲ್ಲಿ ಹಂಚಿಕೆ

ಜಿಲ್ಲೆಯ ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ನಿವೇಶನಗಳನ್ನು ಫಲಾನುಭವಿಗಳಿಗೆ ವಿತರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ. ಅಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸಿ 50,000ಕ್ಕೂ ಹೆಚ್ಚು ನಿವೇಶನಗಳನ್ನು ಮುಂದಿನ 3 ತಿಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಿ ಈ ಮಹತ್ವಕಾಂಕ್ಷಿ ಆಶ್ರಯ ಯೋಜನೆಯನ್ನು ಸಾಕಾರಗೊಳಿಸಲು ತಾವೆಲ್ಲರೂ ಕಾರಣೀಭೂತರಾಗಬೇಕು, ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟಕ್ಕೆ ಎತ್ತರಿಸುವ ನಿಟ್ಟಿನಲ್ಲಿ ತಾವೆಲ್ಲರೂ ಕೆಲಸ ಮಾಡಬೇಕೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿವೇಶನ ಹಂಚಿಕೆಗೆ ಜಮೀನು ಮಂಜೂರು ಮಾಡುವುದರ ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಇತರ ಉದ್ದೇಶಗಳಿಗೂ ಜಮೀನು ಮಂಜೂರು ಮಾಡುವುದರಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು, ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು 564.30 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ ಎಂದರು.

ಈ ಪೈಕಿ ಗೌರಿಬಿದನೂರು ತಾಲ್ಲೂಕಿನಲ್ಲಿ ಎಚ್.ನರಸಿಂಹಯ್ಯ ವಿಜ್ಞಾನ ಪಾರ್ಕ್ ನಿರ್ಮಾಣ ಮಾಡಲು-132.2 ಎಕರೆ, ಜಿಲ್ಲೆಯ 157 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು- 102 ಎಕರೆ ಮತ್ತು ಸ್ಮಶಾನಕ್ಕಾಗಿ–124.28 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಇದಲ್ಲದೇ ವಿವಿಧ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕಾಗಿ- 22, ಶಾಲಾ-ಕಾಲೇಜುಗಳ ಕಟ್ಟಡಗಳ ನಿರ್ಮಾಣಕ್ಕಾಗಿ – 14,

ದೋಬಿಘಾಟ್ ನಿರ್ಮಾಣಕ್ಕಾಗಿ– 1.22, ಗ್ರಾಮ ಪಂಚಾಯತ್ ಕಟ್ಟಡಗಳ ನಿರ್ಮಾಣಕ್ಕಾಗಿ – 6.10, ನ್ಯಾಯಾಂಗ ವಸತಿ ಗೃಹಗಳಿಗಾಗಿ-19, ಪೊಲೀಸ್ ವಸತಿ ಗೃಹಗಳಿಗೆ-12, ವಸತಿ ನಿಲಯಗಳಿಗಾಗಿ – 38, ಗೋಶಾಲೆಗಳಿಗೆ – 9.38, ಕ್ರೀಡಾಂಗಣಕ್ಕೆ – 6, ಅಂಗನವಾಡಿ ಕೇಂದ್ರ – 4.38, ನಾಡ ಕಚೇರಿ – 3.20, ಕನಕಭವನ – 0.20, ತಾಯಿ ಮತ್ತು ಮಕ್ಕಳ ಆಸ್ಪತ್ರೆ – 7.35, ತಾಲ್ಲೂಕು ಆಸ್ಪತ್ರೆ – 4.35, ಮಂಚೇನಹಳ್ಳಿ ತಾಲ್ಲೂಕು ಮಿನಿವಿಧಾನ ಸೌಧ – 5, ತಹಸೀಲ್ದಾರ್ ಗಳ ವಸತಿ ಗೃಹ – 0.27, ಸಂಚಾರಿ ಪೊಲೀಸ್ ಠಾಣೆ – 0.20,

ಮೀನುಗಾರಿಕೆ ಇಲಾಖೆ – 1, ಕೆ.ಎಸ್.ನಿಸಾರ್ ಸಂಸ್ಥೆ – 2.20, ಸತ್ಯಸಾಯಿ ಆಸ್ಪತ್ರೆಗೆ – 4, ಪಾಲಿಕ್ಲಿನಿಕ್ ಆಸ್ಪತ್ರೆಗೆ – 1.02, ಸಿದ್ದರಾಮೇಶ್ವರ ಭವನ – 0.30, ವಾಲ್ಮೀಕಿ ಭವನ – 0.30, ಡಾ.ಬಿ.ಆರ್.ಅಂಬೇಡ್ಕರ್ ಭವನ – 3.20, ಡಾ.ಬಾಬು ಜಗಜೀವನ ರಾಂ ಭವನ – 0.3, ಭವನಗಳ ನಿರ್ಮಾಣಕ್ಕೆ – 2.25, ತೋಟಗಾರಿಕೆ ಇಲಾಖೆಗೆ – 6, ಕೆ.ಪಿ.ಟಿ.ಸಿ.ಎಲ್.ಗೆ – 1.20, ಶುದ್ಧ ನೀರಿನ ಘಟಕಗಳ ನಿರ್ಮಾಣಕ್ಕೆ-28,

ಗ್ರಾಮ ಲೆಕ್ಕಿಗರ ವಸತಿ ಗೃಹಗಳಿಗೆ–1.20, ಮಿಲಿಟರಿ ಕೋಟಾದಡಿ–2, ರಾಜೀವ್ ಗಾಂಧೀ ಸೇವಾ ಕೇಂದ್ರ – 0.20, ಹಾಲು ಒಕ್ಕೂಟಗಳಿಗೆ– 1, ಗುರು ಭವನ – 0.20, ನಿರಾಶ್ರೀತರಿಗೆ (ಭಿಕ್ಷುಕರ ಪುನರ್ ವಸತಿಗೆ) – 9.38, ಎ.ಪಿ.ಎಮ್.ಸಿ. ಮಾರುಕಟ್ಟೆಗೆ– 2 ಎಕರೆ ಹಾಗೂ ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕಾಗಿ– 3.20 ಎಕರೆ ಸೇರಿದಂತೆ ಒಟ್ಟಾರೆ 564.30 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ ಎಂದು ಸವಿಸ್ತಾವರವಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Follow us On

FaceBook Google News