ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಬೇಜವಾಬ್ದಾರಿಯಿಂದ ನೌಕರರ ಸಮಸ್ಯೆ ಉದ್ಭವ: ಆಮ್ ಆದ್ಮಿ ಪಕ್ಷ ಆರೋಪ!
ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಬೇಜವಾಬ್ದಾರಿಯಿಂದ ನೌಕರರ ಸಮಸ್ಯೆ ಉದ್ಭವ: ಆಮ್ ಆದ್ಮಿ ಪಕ್ಷ ಆರೋಪ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ: ಆಮ್ ಆದ್ಮಿ ಪಕ್ಷ ಆಗ್ರಹ
(Kannada News) : ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವೈಫಲ್ಯವಾಗಿದ್ದು, ಜನ ಸಾಮಾನ್ಯರು ನಲುಗುವಂತೆ ಮಾಡಿದೆ. ರೈತ, ಕಾರ್ಮಿಕ, ಮಹಿಳಾ ವಿರೋಧಿಯಾದ ಈ ಸರ್ಕಾರ ಯಾವುದೇ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸದೆ ವೈಫಲ್ಯಗೊಂಡಿದೆ.
ಈಗ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸದೆ ಜನಸಾಮಾನ್ಯರನ್ನು ತೊಂದರೆಗೆ ಸಿಲುಕಿಸಿದೆ.
ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರ ಬೇಜವಾಬ್ದಾರಿಯಿಂದ ನೌಕರರ ಸಮಸ್ಯೆ ಉಲ್ಭಣ ಆಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸರಿಯಾಗಿ ಸ್ಪಂದಿಸದೆ ಉದ್ದಟತನ ತೋರಿದ ಸರ್ಕಾರ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
1.30 ಲಕ್ಷದಷ್ಟು ನೌಕರರು ಅನೇಕ ವರ್ಷಗಳಿಂದ ಸೂಕ್ತ ಸ್ಥಾನಮಾನಕ್ಕೆ ಹೋರಾಟ ಮಾಡುತ್ತಲೇ ಇದ್ದಾರೆ ಆದರೂ ಯಾವುದೇ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸಿಲ್ಲ, ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನೌಕರರು ಮಾತುಕತೆಗೆ ಸಿದ್ದರಿದ್ದಾರೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಹೊರತು ಸಮಸ್ಯೆ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಹಣಕಾಸಿನ ಸಮಸ್ಯೆ ಹೇಳಿಕೊಂಡು ಅನೇಕ ತಿಂಗಳುಗಳ ಕಾಲ ಸಂಬಳ ನೀಡದೆ ಸತಾಯಿಸಿದ್ದ ಸರ್ಕಾರ ಅಂತೂ ಇಂತೂ ಕೆಲವರಿಗೆ ಸಂಬಳ ನೀಡಿ ಕೈತೊಳೆದುಕೊಂಡಿತೆ ಹೊರತು ಸರಿಯಾಗಿ ಸಮಸ್ಯೆ ನಿಭಾಯಿಸದೆ ನೌಕರರನ್ನು ಬೀದಿ ಪಾಲು ಮಾಡಿದೆ ಎಂದು ಆರೋಪಿಸಿದರು.
ಪ್ರಸ್ತುತ ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಾದರೆ ಸರ್ಕಾರಿ ನೌಕರರಿಗೆ ನೀಡಿತ್ತಿರುವ ಸಂಬಳವನ್ನಾದರೂ ನೀಡಿ. ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನಾಲಾಯಕ್ ಮಂತ್ರಿಯಾಗಿದ್ದು ಇದುವರೆಗು ಇವರ ಬಳಿ ಯಾವುದೇ ಸಮಸ್ಯೆ ಹೋದರು ಅಚ್ಚುಕಟ್ಟಾಗಿ ನಿಭಾಯಿಸಿದ ಇತಿಹಾಸವೇ ಇಲ್ಲ.
ಇಂತಹ ದುರ್ಬಲ ಮಂತ್ರಿಯನ್ನು ಬಿಟ್ಟು ನೇರವಾಗಿ ಮುಖ್ಯಮಂತ್ರಿಗಳೆ ನೌಕರರ ಜತೆ ಮಾತುಕತೆಗೆ ಇಳಿದು ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಈ ದಿಡೀರ್ ಪ್ರತಿಭಟನೆಯಿಂದ ಸಾವಿರಾರು ಜನರು ತೊಂದರೆಗೆ ಸಿಲುಕಿದ್ದಾರೆ. ಇವರಿಗೆ ಮುಖ್ಯಮಂತ್ರಿಗಳು ಸೂಕ್ತವಾಗಿ ಉತ್ತರಿಸಬೇಕು. ಕೆಎಸ್ಆರ್ಟಿಸಿಯ ನಾಲ್ಕೂ ವಿಭಾಗಗಳಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದಿಂದ ಇಡೀ ದೇಶದಲ್ಲೇ ಉತ್ತಮ ಸಾರಿಗೆ ವ್ಯವಸ್ಥೆ ಹಳ್ಳ ಹಿಡಿದಿದೆ.
ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಶೀಘ್ರ ಸಮಸ್ಯೆ ಪರಿಹಾರ ಮಾಡಬೇಕು ಎಂದರು, ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ಉಪಸ್ಥಿತರಿದ್ದರು.
Web Title : employees issue created by Laxman Savadi irresponsible says AAP