ಕಾಡ್ಗಿಚ್ಚಿನಿಂದ ಬಂಡೀಪುರ ರಕ್ಷಣೆಗೆ ಬೆಂಕಿ ತಡೆ ರೇಖೆ

ಕಳೆದ ಬೇಸಿಗೆಯಲ್ಲಿ ಕಾಡ್ಗಿಚ್ಚಿಗೆ ಸಿಲುಕದಂತೆ ಬಂಡೀಪುರ ಅರಣ್ಯವನ್ನು ಕಾಪಾಡಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮುಂಬರುವ ಬೇಸಿಗೆಯ ದಿನಗಳಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಸಲುವಾಗಿ ಈಗಿನಿಂದಲೇ ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ.

(Kannada News) : ಚಾಮರಾಜನಗರ: ಕಳೆದ ಬೇಸಿಗೆಯಲ್ಲಿ ಕಾಡ್ಗಿಚ್ಚಿಗೆ ಸಿಲುಕದಂತೆ ಬಂಡೀಪುರ ಅರಣ್ಯವನ್ನು ಕಾಪಾಡಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮುಂಬರುವ ಬೇಸಿಗೆಯ ದಿನಗಳಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಸಲುವಾಗಿ ಈಗಿನಿಂದಲೇ ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ.

ಅರಣ್ಯದ ಸುತ್ತಲೂ ಬೆಂಕಿ ತಡೆ ರೇಖೆಗೆ ಆದ್ಯತೆ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ಬೀಳದಂತೆ ತಡೆಯಲು ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 2800 ಚದರ ಕಿ.ಮೀ. ಬೆಂಕಿ ತಡೆ ರೇಖೆ ನಿರ್ಮಿಸುವ ಕಾರ್ಯವನ್ನು ಆರಂಭಿಸಿದ್ದಾರೆ.

ಕಳೆದ ಬೇಸಿಗೆಯ ಅವಧಿಯಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಬಂಡೀಪುರ ಅರಣ್ಯಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತಲ್ಲದೆ, ಹೆದ್ದಾರಿಯನ್ನು ಕೂಡ ಬಂದ್ ಮಾಡಿದ್ದರಿಂದ ಜನ ಸಂಚಾರವಿಲ್ಲದ ಕಾರಣದಿಂದಾಗಿ, ಜತೆಗೆ ಅರಣ್ಯಾಧಿಕಾರಿಗಳು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದರಿಂದ ಯಾವುದೇ ರೀತಿಯ ಅಗ್ನಿ ಅನಾಹುತಗಳು ಸಂಭವಿಸಿರಲಿಲ್ಲ.

ಈ ಬಾರಿಯೂ ಕಳೆದ ಬಾರಿಯಂತೆ ಯಾವುದೇ ಅಗ್ನಿ ಅನಾಹುತಗಳು ಸಂಭವಿಸಬಾರದು ಎಂಬ ಕಾರಣಕ್ಕೆ ಅಧಿಕಾರಿಗಳು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು ಈ ಪೈಕಿ ಬೆಂಕಿ ತಡೆ ರೇಖೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು ಬಂಡೀಪುರ  ಅಭಯಾರಣ್ಯ ವ್ಯಾಪ್ತಿಯ 13ವಲಯಗಳಲ್ಲಿ 2828ಕೀಮಿ ಬೆಂಕಿ ರೇಖೆ ನಿರ್ಮಾಣ ಮಾಡುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದು, ಈ ಸಂಬಂಧ ಕೆಲಸಗಳನ್ನು ಆರಂಭಿಸಿದ್ದಾರೆ.

 ಕಳೆದ ವರ್ಷ ಉತ್ತಮವಾಗಿ ಮಳೆ ಬಂದಿತ್ತು ಪರಿಣಾಮ ಜನವರಿವರೆಗೂ ಮಣ್ಣು ಹಸಿಯಾಗಿಯೇ ಇತ್ತು. ಆದರೆ ಈ ಬಾರಿ ಈ ವ್ಯಾಪ್ತಿಯಲ್ಲಿ ಮಳೆ ಕಡಿಮೆ ಸುರಿದ ಕಾರಣದಿಂದ ಬಹುಬೇಗ ಕುರುಚಲು ಗಿಡಗಳು ಒಣಗುವ ಸಂಭವ ಜಾಸ್ತಿಯಿದೆ.

ಹೀಗಾಗಿ ಅರಣ್ಯದ ಸುತ್ತಲೂ ನಾಡಿಗೆ ಹೊಂದಿಕೊಂಡಂತಿರುವ ಕುರುಚಲು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಗುತ್ತಿದ್ದು, ಇದರಿಂದ ಬೀಡಿ ಸಿಗರೇಟ್ ಇನ್ನಿತರ ಬೆಂಕಿ ಕಿಡಿಗಳು ಹಾರಿದರೂ ಅದರ ಪರಿಣಾಮ ಅರಣ್ಯದ ಮೇಲೆ ಬೀರದಂತೆ ತಡೆಯಲು ಸಾಧ್ಯವಾಗಲಿದೆ.

ಈ ಹಿಂದೆ ಬಂಡೀಪುರ ಅಭಯಾರಣ್ಯದಲ್ಲಿ ನಡೆದ ಕಾಡ್ಗಿಚ್ಚು ಪ್ರಕರಣವನ್ನು ಗಮನಿಸಿದರೆ ಬೆಂಕಿ ತಡೆ ರೇಖೆಯನ್ನು ನಿರ್ಮಾಣ ಮಾಡದ ಪ್ರದೇಶಗಳಲ್ಲಿಯೇ ಹೆಚ್ಚಿನ ಅವಘಡ ಸಂಭವಿಸಿರುವುದು ಕಂಡು ಬಂದಿದೆ.

ಇದನ್ನೆಲ್ಲ ಮನಗಂಡ ಅರಣ್ಯಾಧಿಕಾರಿಗಳು ಈ ಬಾರಿ ಬೆಂಕಿತಡೆ ರೇಖೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಬಂಡೀಪುರ ಅಭಯಾರಣ್ಯದ ಮೇಲುಕಾಮನಹಳ್ಳಿ ಗೇಟ್ ನಿಂದ ಕೆಕ್ಕನಹಳ್ಳ ಗೇಟ್ ವರೆಗೆ ಹಾಗೂ ಮದ್ದೂರು ಚೆಕ್ ಪೊಸ್ಟ್ ನಿಂದ ಮೂಲೆಹೊಳೆ ಚೆಕ್ ಪೋಸ್ಟ್ ವರೆಗೂ ಹಾಗೂ ಇತರ ಸ್ಥಳಗಳಲ್ಲಿ ಬೆಂಕಿ ತಡೆ ರೇಖೆಯನ್ನು ನಿರ್ಮಾಣ ಮಾಡಲಾಗುತ್ತಿದೆ.

ಇದರ ಜತೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯ ಬದಿಯ  50 ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿರುವ ಎಲ್ಲ ಕುರುಚಲು, ಕಳೆಗಿಡಗಳನ್ನು ತೆರವುಗೊಳಿಸಿ ಬೆಂಕಿ ತಡೆ ರೇಖೆ ನಿರ್ಮಾಣ ಮಾಡಿಸಲು ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಪ್ಪಿಸಲು ಕಾಡಂಚಿನ ಗ್ರಾಮಗಳ ಜನರ ಸಹಕಾರ ಅಗತ್ಯವಾಗಿದೆ.

ಇನ್ನು ಬೇಸಿಗೆಯಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುವುದು ಅಗತ್ಯವಾಗಿದೆ.

ಎಲ್ಲರೂ ಈಗಿನಿಂದಲೇ ಕೇವಲ ಬಂಡೀಪುರ ಅರಣ್ಯ ಮಾತ್ರವಲ್ಲದೆ, ತಮ್ಮ ಸುತ್ತಮುತ್ತಲಿನ ಅರಣ್ಯದ ಬಗ್ಗೆ ಕಾಳಜಿ ವಹಿಸಿ ಬೇಸಿಗೆಯಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತವನ್ನು ತಪ್ಪಿಸುವ ಕೆಲಸದಲ್ಲಿ ಕೈ ಜೋಡಿಸಬೇಕಾಗಿದೆ.

– ಬಿ ಎಂ ಲವಕುಮಾರ್ 

Web Title : Fire Rescue Line for Bandipur forest

Scroll Down To More News Today