ಮುಂದಿನ 3 ವರ್ಷಗಳಲ್ಲಿ 30 ಸಾವಿರ ಶಿಕ್ಷಕರ ನೇಮಕ, ಸಚಿವ ಎಸ್. ಸುರೇಶ್ ಕುಮಾರ್
30 thousand teachers to be recruited in next 3 years, Says Suresh Kumar
ಕನ್ನಡ ನ್ಯೂಸ್ ಟುಡೇ – Kolar News
ಕೋಲಾರ : ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 30 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು ಎಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಸುರೇಶ್‍ಕುಮಾರ್ ಅವರು ತಿಳಿಸಿದರು.
ಕೋಲಾರ ಜಿಲ್ಲೆಯ ಕೆಂಬೋಡಿ, ವಡಗೂರು ಹಾಗೂ ಕಾಳಹಸ್ತಿ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. 30 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ. ವರ್ಷಕ್ಕೆ 10 ಸಾವಿರದಂತೆ 3 ವರ್ಷಗಳಲ್ಲಿ ನೇಮಕ ಮಾಡಲಾಗುವುದು. ಅದೇ ರೀತಿ ಮುಂದಿನ 3 ವರ್ಷಗಳಲ್ಲಿ 26 ಸಾವಿರ ಶಿಕ್ಷಕರು ನಿವೃತ್ತಿ ಹೊಂದಲಿದ್ದಾರೆ ಎಂದು ಮಾಹಿತಿ ನೀಡಿದರು.
ನಲಿ-ಕಲಿ ಶಿಕ್ಷಣ ವ್ಯವಸ್ಥೆಯು ಭಾರತದಲ್ಲೇ ಯಶಸ್ವಿಯಾದ ಕಾರ್ಯಕ್ರಮವಾಗಿದೆ. ಈ ನಲಿ-ಕಲಿ ಪದ್ದತಿಯನ್ನು ಎಸ್.ಎಸ್.ಎಲ್.ಸಿ ಹಂತದವರೆಗೂ ವಿಸ್ತರಿಸಿದರೆ, ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದ ಅವರು, ವಡಗೂರು ಶಾಲೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಬಿಸಿಯೂಟವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಈ ಶಾಲೆಯನ್ನು ಪೈಲೆಟ್ ಯೋಜನೆಯಲ್ಲಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸಿರಿಧಾನ್ಯದ ಬಿಸಿಯೂಟವನ್ನು ಇತರೆ ಶಾಲೆಗಳಿಗೂ ವಿಸ್ತರಿಸಲಾಗುವುದು. ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಕ್ಕೆ ಹೆಚ್ಚಿನ ಅನುಕೂಲವಿದೆ. ಇದರಿಂದ ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಂತರ ಮಕ್ಕಳೊಂದಿಗೆ ಬಿಸಿಯೂಟವನ್ನು ಸವಿದರು.
ಕೆಂಬೋಡಿ ಶಾಲೆಗೆ ಭೇಟಿ ನೀಡಿ, ಬಿಸಿಯೂಟದ ಗುಣಮಟ್ಟ ಪರಿಶೀಲನೆ ಸ್ಯಾಮಸಾಂಗ್ ವತಿಯಿಂದ ನೀಡಿರುವ ಡೆಸ್ಕ್‍ಗಳ ವೀಕ್ಷಣೆ, ಶೌಚಾಲಯಗಳ ಪರಿಶೀಲನೆ ಹಾಗೂ ರೋಟರಿ ವತಿಯಿಂದ ಅಳವಡಿಸಿರುವ ಕೈತೊಳೆಯುವ ವ್ಯವಸ್ಥೆ ಕುರಿತು ವೀಕ್ಷಣೆ ನಡೆಸಿದ ಅವರು, ಮಕ್ಕಳಿಗೆ ಶಾಲಾ ಹಂತದಲ್ಲೇ ಕೈತೊಳೆಯುವ ಪರಿಕಲ್ಪನೆ ಹಾಗೂ ಕೈತೊಳೆಯುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಬೇಕು. ಸ್ವಚ್ಛವಾಗಿ ಕೈತೊಳೆಯುವುದರಿಂದ ಶೇ. 50 ರಷ್ಟು ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ನಂತರ ಮಕ್ಕಳೊಂದಿಗೆ ಸಂವಾದ ನಡೆಸಿ, ದೂರದ ಊರುಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳ ಸಮಸ್ಯೆಗಳ ಆಲಿಸಿದರು. ಸಾರಿಗೆ ಬಸ್‍ಗಳಲ್ಲಿ ವಿದ್ಯಾರ್ಥಿ ಪಾಸ್ ಇರುವ ವಿದ್ಯಾರ್ಥಿಗಳೊಂದಿಗೆ ಚಾಲಕ, ನಿರ್ವಾಹಕರು ಹೇಗೆ ವರ್ತಿಸುತ್ತಾರೆ, ನಿಗದಿತ ನಿಲುಗಡೆಗಳಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳನ್ನು ಬಸ್‍ಗೆ ಹತ್ತಿಸಿಕೊಳ್ಳುವರೇ ಎಂದು ಪ್ರಶ್ನಿಸಿದರು. ಇದಕ್ಕೆ ವಿದ್ಯಾರ್ಥಿಗಳು ಸಾರಿಗೆ ಬಸ್‍ಗಳಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವಲ್ಲಿ ತಾರತಮ್ಯ ಮಾಡುತ್ತಾರೆ. ಬಸ್‍ಗಳಲ್ಲಿ ಖಾಲಿಯಿದ್ದರೂ ಹಿಂದೆ ಬಸ್ ಬರುತ್ತಿದೆ ಎಂದು ಕಾರಣ ಹೇಳಿ ಹತ್ತಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಮಕ್ಕಳ ಗ್ರಾಮಸಭೆಗಳನ್ನು ನಡೆಸಿ ಈ ಸಭೆಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಸಂಬಂದಿಸಿದ ಇಲಾಖೆಗಳಿಂದ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೈ.ಎ ನಾರಾಯಣಸ್ವಾಮಿ, ಜಿಲ್ಲಾಧಿಕಾರಿಗಳಾದ
ಜೆ. ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರತ್ನಯ್ಯ ಅವರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Web Title : 30 thousand teachers to be recruited in next 3 years, Says Suresh Kumar
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
Follow us On
Google News |