ಕೋಲಾರ : ಜಿಲ್ಲೆಗೆ ವಿದೇಶಿ ಅಧ್ಯಯನ ತಂಡ ಭೇಟಿ – ಪ್ರಾತ್ಯಕ್ಷಿಕೆ ಮೂಲಕ ಜಿಲ್ಲೆಯ ಮಾಹಿತಿ ವಿವರಣೆ

Kolar - Foreign study team visits the district, Given information by demonstration

🌐 Kannada News :

ಕನ್ನಡ ನ್ಯೂಸ್ ಟುಡೇ

ಕೋಲಾರ : ಆ್ಯಪ್ರೋ ಏಷಿಯನ್ ಮತ್ತು ಲ್ಯಾಟಿನ್ ಅಮೇರಿಕಾದ ವಿವಿಧ 22 ದೇಶಗಳ 28 ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಹಾಗೂ ಕೃಷಿಗೆ ನೀಡಿರುವ ಉತ್ತೇಜನ ಕ್ರಮಗಳನ್ನು ವೀಕ್ಷಣೆ ಮಾಡಲಿದ್ದು, ಇವರಿಗೆ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಪ್ರಾತ್ಯಕ್ಷಿಕೆ ನೀಡುವ ಮೂಲಕ ಜಿಲ್ಲೆಯ ಕುರಿತ ಸಮಗ್ರ ಮಾಹಿತಿಯನ್ನು ವಿವರಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಾತ್ಯಕ್ಷಿಕೆ ಮೂಲಕ ವಿದೇಶಿ ಅಧ್ಯಯನ ತಂಡಕ್ಕೆ ಮಾಹಿತಿ ನೀಡುತ್ತಾ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೂರು ಹಂತಗಳಾದ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಗಳಿಗೆ ಅಧಿಕಾರ ವಿಕೇಂದ್ರಿಕರಣ ಮಾಡಲಾಗಿದೆ. ಜಿಲ್ಲೆಯಲ್ಲಿ 156 ಗ್ರಾಮ ಪಂಚಾಯಿತಿಗಳು ಹಾಗೂ 06 ತಾಲ್ಲೂಕು ಪಂಚಾಯಿತಿಗಳು ಇವೆ ಎಂದು ಮಾಹಿತಿ ನೀಡಿದರು.

ಭಾರತ ಸರ್ಕಾರವು ಮಹಾತ್ಮ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮೀಣ ಭಾಗಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಈ ಯೋಜನೆಯು ಭಾರತ ಸರ್ಕಾರದ ಬೃಹತ್ ಯೋಜನೆಯಾಗಿದ್ದು, ಪ್ರತಿ ವರ್ಷ 60 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ. ಕೋಲಾರ ಜಿಲ್ಲೆಯಲ್ಲಿಯೇ 171 ಕೋಟಿ ರೂಗಳನ್ನು ಬಳಸಲಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 2,05,258 ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ಪ್ರತಿ ದಿನಕ್ಕೆ 249 ರೂ.ಗಳ ಕೂಲಿ ನೀಡಲಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಈಗಾಗಲೇ 36,71,000 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ಹಾಗೂ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಿ ಕೋಲಾರ ಜಿಲ್ಲೆಯನ್ನು 2017 ರಲ್ಲಿಯೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 15,000 ಗಳ ಸಹಾಯಧನ ನೀಡಲಾಗುತ್ತದೆ. ಕೋಲಾರ ಜಿಲ್ಲೆಗೆ 2017 ಅಕ್ಟೋಬರ್ 02 ರಂದು ಭಾರತ ಸರ್ಕಾರವು ಸ್ವಚ್ಛ ಭಾರತ ಮಿಷನ್ ಪ್ರಶಸ್ತಿಯನ್ನು ನೀಡಿದೆ. ಜಿಲ್ಲೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಇದುವರೆಗೆ 1280 ಮಲ್ಟಿ ಆರ್ಚಲ್ ಚೆಕ್‍ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಳೆ ನೀರು ಸಂಗ್ರಹಣೆಯಾಗಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಜಿಲ್ಲೆಯಲ್ಲಿ ಗೋಕುಂಟೆಗಳು,ಜಾನುವಾರು ತೊಟ್ಟಿಗಳು, ಕೆರೆಗಳ ಹೂಳು ತೆಗೆಯುವುದು, ಶಾಲಾ ಕಾಂಪೌಂಡುಗಳ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ರಸ್ತೆಗಳ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ನರೇಗಾ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ ಎಂದರು.

ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯು ಪ್ರಮುಖ ಬೆಳೆಯಾಗಿದ್ದು, ರೇಷ್ಮೆ ಬೆಳೆಗೆ ಶೇ. 90 ರಷ್ಟು ಸಬ್ಸಿಡಿ ನೀಡುತ್ತಿದ್ದು, ಬೆಳೆಗೆ ಪ್ರೋತ್ಸಾಹ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ 1000 ಎಕರೆ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಳ್ಳಲು 1.2 ಲಕ್ಷ ಸಹಾಯಧನ ನೀಡಲಾಗುತ್ತಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 5 ವರ್ಷಗಳಲ್ಲಿ 61.78 ಕಿ.ಮೀ ರಸ್ತೆಯನ್ನು ನಿರ್ಮಿಸಲಾಗಿದೆ. ಕೆ.ಸಿ ವ್ಯಾಲಿ ಯೋಜನೆಯಡಿ ಜಿಲ್ಲೆಗೆ ಶುದ್ದೀಕರಿಸಿದ ನೀರನ್ನು ತಂದು ಈಗಾಗಲೇ 47 ಕೆರೆಗಳಿಗೆ ತುಂಬಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್ ಅವರು ಮಾತನಾಡಿ, ಕೋಲಾರ ಜಿಲ್ಲೆಯು ಹಾಲು, ರೇಷ್ಮೆ ಹಾಗೂ ತರಕಾರಿ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ. ಬೆಂಗಳೂರಿನ ಶೇ. 40 ರಷ್ಟು ಜನರಿಗೆ ತರಕಾರಿಗಳನ್ನು ಕೋಲಾರದಿಂದ ಪೂರೈಸಲಾಗುತ್ತದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರೂ ಸಿಗುವ ಅಲ್ಪ ನೀರಿನಲ್ಲಿ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯುತ್ತಾರೆ. ಅಧ್ಯಯನ ತಂಡವು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ, ಉಪಕಾರ್ಯದರ್ಶಿಗಳಾದ ಸಂಜೀವಪ್ಪ, ಹೈದರಾಬಾದ್‍ನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ರೂರಲ್ ಡೆವೆಲೋಪ್‍ಮೆಂಟ್‍ನ ಸಂಯೋಜಕರಾದ ಡಾ|| ಆರ್. ಚನ್ನಾದೊರೈ ಅವರು ಉಪಸ್ಥಿತರಿದ್ದರು.////


 

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.