ರಾಜ್ಯ ಮಟ್ಟ ಪ್ರತಿಭಾ ಕಾರಂಜಿ ಉದ್ಘಾಟಿಸಿದ ಸಚಿವ ಎಸ್. ಸುರೇಶ್‍ಕುಮಾರ್

Inauguration of the State Level Pratibha Karanji Program By S.Sureshkumar

ಕನ್ನಡ ನ್ಯೂಸ್ ಟುಡೇKolar News 

ಕೋಲಾರ : ಶಿಕ್ಷಣ ಎಂದರೆ ಬರಿ ಅಂಕಗಳನ್ನು ಮಾತ್ರ ಪಡೆಯುವುದಿಲ್ಲ. ಒಬ್ಬ ವ್ಯಕ್ತಿಯನ್ನು ನಾಗರೀಕನನ್ನಾಗಿ ಮಾಡಲು ಶಿಕ್ಷಣವೆಂಬ ಅಸ್ತ್ರದಿಂದ ಮಾತ್ರ ಸಾಧ್ಯ ಎಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಸುರೇಶ್‍ಕುಮಾರ್ ಅವರು ತಿಳಿಸಿದರು.

ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋಲಾರ ಜಿಲ್ಲೆಯು ರಾಜ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿಯನ್ನು ನೀಡಿದ ಜಿಲ್ಲೆಯಾಗಿದೆ. ಜಿಲ್ಲೆಯಿಂದ ಅತಿ ಹೆಚ್ಚಿನ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ನೀಡಿದ್ದು, ಆಡಳಿತದಲ್ಲಿ ಅವರ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿದರು.

ರಾಜ್ಯ ಮಟ್ಟ ಪ್ರತಿಭಾ ಕಾರಂಜಿ ಉದ್ಘಾಟಿಸಿದ ಸಚಿವ ಎಸ್. ಸುರೇಶ್‍ಕುಮಾರ್ - Kannada News

ಈ ಕಾರ್ಯಕ್ರಮದಲ್ಲಿ ಒಟ್ಟು 34 ಶೈಕ್ಷಣಿಕ ಜಿಲ್ಲೆಗಳಿಂದ ಸುಮಾರು 1800 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಿಗೆ ಆರೋಗ್ಯ ತಪಾಸಣೆ ಮಾಡುತ್ತಿರುವುದು ವಿಶಿಷ್ಟ ಕಾರ್ಯವಾಗಿದೆ. ಸುಮಾರು 6 ವರ್ಷಗಳಿಂದ ವಿಕಾಸನ ಸಂಸ್ಥೆ ವತಿಯಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಉಚಿತವಾಗಿ ನೇತ್ರ ಪರೀಕ್ಷೆ ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ 8 ನೇ ತರಗತಿಯ ಎಲ್ಲಾ ಮಕ್ಕಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ನೇತ್ರ ತಪಾಸಣೆ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಕೆ.ಸಿ ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಗೆ ನೀರು ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯು ಆರ್ಥಿಕವಾಗಿ ಅಭಿವೃದ್ಧಿಯತ್ತ ಸಾಗುತ್ತದೆ ಎಂಬ ಭರವಸೆ ಇದೆ ಎಂದ ಅವರು ಸಮಾಜಕ್ಕೆ ಅಗತ್ಯವಿರುವ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವಲ್ಲಿ ತಮ್ಮ ಮಕ್ಕಳನ್ನು ತಯಾರಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲೆ ಇದೆ ಎಂದು ತಿಳಿಸಿದರು.

ಮಕ್ಕಳು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಚಟುವಟಿಕೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಮುಂದಿನ ವರ್ಷದಿಂದ ಫಿಟ್ ಇಂಡಿಯಾ ಕಾರ್ಯಕ್ರಮದ ಮೂಲಕ ಫಿಟ್ ಆಗಬೇಕು. ಮೋದಿಯವರ ಪೋನ್ ಪೇ ಚರ್ಚ್ ಕಾರ್ಯಕ್ರಮದಲ್ಲಿ ರಾಜ್ಯದಿಂದ 42 ಮಕ್ಕಳು ಭಾಗವಹಿಸಿದ್ದು ಅತ್ಯಂತ ಸಂತೋಷದ ವಿಷಯ ಎಂದು ತಿಳಿಸಿದರು.

ಅಬಕಾರಿ ಮತ್ತು ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಹೆಚ್ ನಾಗೇಶ್ ಅವರು ಮಾತನಾಡಿ, 15 ವರ್ಷದೊಳಗಿರುವ ಮಕ್ಕಳು ಏನೇ ಕಲಿತರೂ ಅದು ತಮ್ಮ ಜೀವನ ಪೂರ್ತಿ ನೆನಪಿನಲ್ಲಿರುತ್ತದೆ. ಆದ್ದರಿಂದ ಅವರಿಗೆ ಉತ್ತಮ ರೀತಿಯ ಶಿಕ್ಷಣ ಹಾಗೂ ಒಳ್ಳೆಯ ವಾತಾವರಣವನ್ನು ಸೃಷ್ಟಿಸಬೇಕು. ಅವರ ಪ್ರತಿಭೆಯನ್ನು ಹೊರತರುವಂತಹ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯು ರಾಜ್ಯಕ್ಕೆ ಅನೇಕ ಕವಿಗಳು, ಕಲಾವಿದರು, ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೀಡಿದೆ. ವಿದ್ಯೆಯಿಂದ ಮಾತ್ರ ನಮ್ಮ ಬಡತನವನ್ನು ದೂರಮಾಡಲು ಸಾಧ್ಯ. ಫೆಬ್ರವರಿ 11 ಮತ್ತು 12 ರಂದು ಬೃಹತ್ ಉದ್ಯೋಗ ಮೇಳವನ್ನು ನಗರದ ಸಿಬಿಐಟಿ ಕಾಲೇಜಿನಲ್ಲಿ ಆಯೋಜಿಸಿದ್ದು, ಎಲ್ಲಾ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಬೇಕು. ಇಲ್ಲಿಯವರೆಗೂ ಸುಮಾರು 10 ಸಾವಿರ ಜನರು ನೊಂದಾಯಿಸಿಕೊಂಡಿದ್ದಾರೆ. ಸ್ಥಳದಲ್ಲಿ 7 ರಿಂದ 8 ಸಾವಿರ ಜನರಿಗೆ ಉದ್ಯೋಗಗಳನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಜಿಲ್ಲೆಯಲ್ಲಿ ನೀರಿನ ಕೊರತೆಯನ್ನು ನೀಗಿಸಲು ಎತ್ತಿನ ಹೊಳೆ ಯೋಜನೆಯ ಮೂಲಕ ಜಿಲ್ಲೆಗೆ ನೀರು ತರುವಂತಹ ಕೆಲಸ ಮಾಡುತ್ತಿದ್ದೇವೆ. ವಿಮಾನ ನಿಲ್ದಾಣವನ್ನು ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ವೈ.ಎ ನಾರಾಯಣಸ್ವಾಮಿ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಯು ಭೂಮಿಯ ಮೇಲೆ ಇರುವ ಅತ್ಯಂತ ಪವಿತ್ರವಾದ ಸಂಸ್ಥೆಯಾಗಿದೆ. ಶಿಕ್ಷಣದಿಂದ ಮಾತ್ರ ಒಂದು ದೇಶವು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳು ಅಂಕ ಆಧಾರಿತ ಶಿಕ್ಷಣ ನೀಡದೆ ಜ್ಞಾನಾಧಾರಿತ ಶಿಕ್ಷಣವನ್ನು ನೀಡಬೇಕು. ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಡುವಂತೆ ಮನವಿ ಮಾಡಿದರು. ಮಕ್ಕಳಲ್ಲಿ ಛಲ ತುಂಬಬೇಕು. ಆಗ ಮಾತ್ರ ಜೀವನದಲ್ಲಿ ಅಂದುಕೊಂಡಿರುವುದನ್ನು ಸಾಧಿಸುವುದಕ್ಕೆ ಮುಖ್ಯ. ಇತಿಹಾಸ ಮರೆತರೆ ಇತಿಹಾಸ ಸೃಷ್ಟಿಸಲಾಗದು ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯರಾದ ತೂಪಲ್ಲಿ ಆರ್. ಚೌಡರೆಡ್ಡಿ ಅವರು ಮಾತನಾಡಿ, ಶ್ರೀನಿವಾಸಪುರವು ಎಸ್.ಎಸ್.ಎಲ್ ಸಿ ಪಲಿತಾಂಶದಲ್ಲಿ ರಾಜ್ಯದಲ್ಲಿ 2 ನೇ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಶಿಕ್ಷಕರ ಪರಿಶ್ರಮವೆ ಕಾರಣ. ಶಾಲೆಗಳಲ್ಲಿ ಎಷ್ಟೇ ಸಮಸ್ಯೆಯಿದ್ದರೂ ಸಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೇ ಇನ್ನೂ ಹೆಚ್ಚು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್ ಅವರು ಮಾತನಾಡಿ, ಜ್ಞಾನಪೀಠ ಪುರಸ್ಕೃತರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕಲಿತ ದುಸ್ಥಿತಿಯಲ್ಲಿದ್ದು, ಅದನ್ನು ವಿಶೇಷ ಅನುದಾನ ನೀಡಿ ಜಿರ್ಣೋದ್ದಾರಗೊಳಿಸಬೇಕು. ಮಾಸ್ತಿಯನ್ನು ಪ್ರವಾಸಿ ತಾಣವಾಗಿ ಮಾಡಬೇಕು. ದೇಶ ಏನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಮ್ಮ ಕೊಡುಗೆ ಏನು ಎಂದು ಯೋಚನೆ ಮಾಡಬೇಕು ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಆರ್ ಉಮಾಶಂಕರ್ ಅವರು ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ಪ್ರತಿ ತಿಂಗಳು 2 ದಿನ ಪಠ್ಯ ರಹಿತ ದಿನವನ್ನಾಗಿ ಮಾಡಿದ್ದು ಈ ದಿನಗಳಲ್ಲಿ ಪಠ್ಯೇತರ ಹಾಗೂ ಸಾಂಸೃತಿಕ ಚಟುವಟಿಕೆಗನ್ನು ನಡೆಸಲಾಗುತ್ತದೆ. ಈ ವರ್ಷ ಪಠ್ಯ ಪುಸ್ತಕ ಮತ್ತು ಸಮವಸ್ತ್ರವನ್ನು ಮೊದಲ ದಿನವೇ ನೀಡುವಂತೆ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ತೀರ್ಪುಗಾರರು ತೀರ್ಪುಗಳನ್ನು ಪಕ್ಷಪಾತದಿಂದ ನೀಡಿ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ, ಒಟ್ಟು 1986 ಸರ್ಕಾರಿ ಶಾಲೆಗಳು, 103 ಅನುದಾನ ಶಾಲೆಗಳು, 478 ಅನುದಾನ ರಹಿತ ಶಾಲೆಗಳಿದ್ದು, ಜಿಲ್ಲೆಯಲ್ಲಿ ಒಟ್ಟು 2,19,622 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ಯಾಮಸಂಗ್ ಕಂಪನಿ ವತಿಯಿಂದ ಕೆಂಬೋಡಿಯಲ್ಲಿ ಶಾಲಾ ಕಟ್ಟಡ, ನಂಗಲಿ ಪ್ರೌಢಶಾಲೆಯಲ್ಲಿ ಇನ್ಪೋಸಿಸ್ ವತಿಯಿಂದ ಶಾಲಾ ಕಟ್ಟಡ ಹಾಗೂ ಬಿಇಎಲ್ ಸಂಸ್ಥೆಯ ವತಿಯಿಂದ ವಾನರಾಶಿಯಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದ್ದು, ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಜಿಲ್ಲೆಯು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅರವಿಂದ್ ಕುಮಾರ್, ಅಶೋಕ್ ಪ್ರಸಾದ್, ಬೆಂಗಳೂರಿನ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕರಾದ ಸಿರಿವಣ್ಣವರ್ ಲಲಿತಾ ಚಂದ್ರಶೇಖರ್, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಸೂಲೂರು ಎಂ. ಆಂಜಿನಪ್ಪ, ಮುಳಬಾಗಲು ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ್, ಜಿಲ್ಲಾ ರಕ್ಷಣಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರತ್ನಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Web Title : Inauguration of the State Level Pratibha Karanji Program By S.Sureshkumar
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.

Follow us On

FaceBook Google News

Read More News Today