ಲಾಕ್ ಡೌನ್ ತೆರವು – 4 ರಲ್ಲಿ ಅನುಮತಿಸಲಾದ ಚಟುವಟಿಕೆಗಳು
ಕೋಲಾರ : ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೊಗ್ಯದ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರದ ಕಲವು ನಿರ್ಬಂಧಗಳ ಮೇರೆಗೆ ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಪುನರಾರಂಬಿಸಲು ಹಾಗೂ ಕಂಟೈನ್‍ಮೆಂಟ್ ವಲಯಗಳಲ್ಲಿ ಲಾಕ್‍ಡೌನ್‍ಯನ್ನು ಸೆಪ್ಟೆಂಬರ್ 30 ರ ವರೆಗೂ ವಿಸ್ತರಿಸಿ ಜಿಲ್ಲಾಧಿಕಾರಿಗಳಾದ ಸಿ. ಸತ್ಯಭಾಮ ಅವರು ಆದೇಶಿಸಿದ್ದಾರೆ.
ಶಾಲೆಗಳು, ಕಾಲೇಜುಗಳು. ಶಿಕ್ಷಣ ತರಬೇತಿ ಸಂಸ್ಥೆಗಳು ಸೆಪ್ಟೆಂಬರ್ 30 ರವರೆಗೆ ವಿದ್ಯಾರ್ಥಿಗಳು ಮತ್ತು ನಿಯಮಿತ ತರಗತಿ ಚಟುವಟಿಗಳು ಮುಚ್ಚಿರುವುದು ಮುಂದುವರಿಯಲಿದೆ. ಆನ್ ಲೈನ್ ಮತ್ತು ದೂರಶಿಕ್ಷಣ ಕಲಿಕೆಗಳಿಗೆ ಅನುಮತಿ ಮುಂದುವರಿಸಿ ಮತ್ತು ಪ್ರೋತ್ಸಾಹಿಸಲಾಗುವುದು. 9 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯವುದಕ್ಕಾಗಿ ಕಂಟೈನ್ ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಆಧಾರದ ಮೇಲೆ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಿದೆ.
ಇದು ಅವರ ತಂದೆ-ತಾಯಿಗಳ ಮತ್ತು ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ ಮತ್ತು ಇದಕ್ಕೆ ಸೆಪ್ಟೆಂಬರ್ 21 ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುವುದು. ವಿವಾಹ ಸಂಬಂಧಿತ ಸಮಾರಂಭಗಳಿಗೆ ಅತಿಥಿ ಸಂಖ್ಯೆ 50 ಜನ ಮೀರದಂತೆ ಮತ್ತು ಅಂತ್ಯ ಸಂಸ್ಕಾರ ಸಂಬಂಧಿತ ಕಾರ್ಯಗಳಿಗೆ 20 ಜನರು ಮೀರದಂತೆ ಸೆಪ್ಟೆಂಬರ್ 20 ರವರೆಗೆ ಅನುಮತಿ ನೀಡಿರುವುದನ್ನು ಮುಂದುವರೆಸಲಾಗುವುದು.
ಸಿನಿಮಾ ಮಂದಿರಗಳು, ಈಜುಕೊಳಗಳು, ಮನೋರಂಜನಾ ಉದ್ಯಾನವನಗಳು, ರಂಗಮಂದಿರಗಳು ಮತ್ತು ಅಂತಹುದೆ ಸ್ಥಳಗಳು ಮುಚ್ಚಿರಲಿದೆ. ಕಂಟೈನ್ ಮೆಂಟ್ ವಲಯಗಳಲ್ಲಿ ವೈದ್ಯಕೀಯ ತುರ್ತುಪರಿಸ್ಥಿಗಳಿಗೆ ಮತ್ತು ಅವಶ್ಯಕ ಸರಕು ಮತ್ತು ಸೇವೆಗಳ ಪೊರೈಕೆಯನ್ನು ಕಾಯ್ದುಕೊಳ್ಳುವುದಕ್ಕೆ ಹೊರತುಪಡಿಸಿ ಹೊರಗಿನ ಜನರ ಓಡಾಟವನ್ನು ನಿಷೇಧಿಸಿದೆ.
65 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ವ್ಯಕ್ತಿಗಳು, ಬಹು-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲಿಯೇ ಇರಲು ಸೂಚಿಸಿದೆ.
ಉದ್ಯೋಗದಾತರು. ಕಛೇರಿಗಳು ಮತ್ತು ಕರ್ತವ್ಯ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಉತ್ತಮ ಪ್ರಯತ್ನದ ಆಧಾದ ಮೇಲೆ ಎಲ್ಲಾ ಉದ್ಯೋಗಿಗಳಿಗೆ ಆರೋಗ್ಯ ಸೇತು ಆಪ್‍ನ್ನು ಅಳವಡಿಸಿಕೊಳ್ಳವುದು ಹಾಗೂ ಆಪ್‍ನಲ್ಲಿ ನಿಯಮಿತವಾಗಿ ತಮ್ಮ ಆರೋಗ್ಯ ಸ್ಥಿತಿಯನ್ನು ಇಂದೀಕರಿಸಿಕೊಳ್ಳವುದು.
ಇದು ಅಪಾಯದಲ್ಲಿರುವ ವ್ಯಕ್ತಿಗಳಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ನೀಡಲು ಸಹಕಾರಿಯಾಗುತ್ತದೆ. ಸಾರ್ವಜನಿಕ ಸ್ಥಳಗಳು, ಕಛೇರಿಗಳು ಮತ್ತು ಹೊರಗೆ ಪ್ರಯಾಣಿಸುವ ವೇಳೆಯಲ್ಲಿ ಕಡ್ಡಾಯವಾಗಿ ಮುಖಗವಸು ಧರಿಸುವುದು, ಒಂದೊಮ್ಮೆ ಧರಿಸದಿದ್ದಲ್ಲಿ 200 ರೂ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವ್ಯಾಪಾರ ವಹಿವಾಟು ಸ್ಥಳಗಳಲ್ಲಿ ಕಡ್ಡಾಯವಾಗಿ 6 ಆಡಿಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
ವ್ಯಾಪಾರ ಮಳಿಗೆಗಳ ಬಳಿ ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಮಳಿಗೆದಾರರ ಜವಾಬ್ದಾರಿ. ಒಂದು ವೇಳೆ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ನಡೆಸಿದಲ್ಲಿ ಮಳಿಗೆದಾರರ ವಿರುದ್ದ ಕ್ರಿಮಿನಲ್ ಪ್ರಕರಣ ಒಳಗೊಂಡಂತೆ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿರ್ಬಂದಿಸಿದೆ. ನಿರ್ಬಂದವನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ನಿಯಮದನ್ವಯ ದಂಡ ವಿಧಿಸಲಾಗುವುದು.
ಬೃಹತ್ ಸಾರ್ವಜನಿಕ ಸಭೆಗಳು ಹಾಗೂ ಒಟ್ಟುಗೂಡಿವಿಕೆಗಳನ್ನು ನಿಷೇಧಿಸಲಾಗಿದೆ. ಕೆಲಸದ ಸ್ಥಳಗಳಲ್ಲಿ ಎಲ್ಲಾ ಪ್ರದೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಕೈತೊಳೆಯುವುದಕ್ಕೆ ಮತ್ತು ಸ್ಯಾನಿಟೈಸರ್‍ಗಳನ್ನು ಕಡ್ಡಾಯವಾಗಿ ಬಳಸಬೇಕು.
ಈ ಆದೇಶವು ತುರ್ತು ವೈದ್ಯಕೀಯ ಸೇವೆಗಳು, ಎಲ್ಲಾ ರೀತಿಯ ಸರಕು ಸಾಗಿಸುವ ವಾಹನಗಳು, ಅಗತ್ಯ ಸೇವೆಗಳ ಪೂರೈಕೆಯಲ್ಲಿ ನಿರತವಾಗಿರುವ ಪಾಸ್ ಹೊಂದಿರುವ ಖಾಸಗಿ ವಾಹನಗಳು, ಸರ್ಕಾರಿ ವಾಹನಗಳು ಅಥವಾ ಕರ್ತವ್ಯ ನಿರತ ಸರ್ಕಾರಿ ನೌಕರರ ವಾಹನಗಳು, ಹಾಪ್‍ಕಾಮ್ಸ್, ಪಡಿತರ, ಆಹಾರ ಪದಾರ್ಥಗಳ ಹೋಂ ಡೆಲಿವರಿಗಾಗಿ, ಕಿಚನ್ ಸೇವೆಗಳು (ರಾತ್ರಿ 9.00 ಗಂಟೆಯವರೆಗೆ ಮಾತ್ರ) ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸೇವೆಗಳಿಗೆ ಅನ್ವಯಿಸುವುದಿಲ್ಲ.
ಮುಂದುವರೆದು, ಈ ಆದೇಶವು ಒಂದಕ್ಕಿಂತ ಹೆಚ್ಚಿನ ಪಾಳಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಘಟಕಗಳು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಅಥವಾ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಪ್ರಯಾಣಿಸಿರುವ ಸಾರ್ವಜನಿಕರು ಮತ್ತು ಸರಕು ಸರಂಜಾಮುಗಳು, ವಿವಿಧ ಪ್ರದೇಶಗಳಿಂದ ಆಗಮಿಸುವ ಸರಕು ಅನ್‍ಲೋಡ್ ಪ್ರಕ್ರಿಯೆ ಮತ್ತು ಬಸ್ಸು, ರೈಲು ಹಾಗೂ ವಿಮಾನಗಳಿಂದ ಆಗಮಿಸಿ ತಮ್ಮ ವಾಸಸ್ಥಾನಗಳಿಗೆ ತೆರಳುತ್ತಿರುವ ಸಾರ್ವಜನಿಕರಿಗೆ ಅನ್ವಯಿಸುವುದಿಲ್ಲ.
ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಷತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51 ರಿಂದ 60 ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188 ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Follow us On
Google News |