ತಲಕಾಡಿನಲ್ಲಿ ಘಟಿಸುತ್ತಿದೆ, ಅಪರೂಪದ ಪಂಚಲಿಂಗ ದರ್ಶನ

ಮತ್ತೆ ತಲಕಾಡಿನಲ್ಲಿ ಪಂಚಲಿಂಗ ದರ್ಶನ (ಡಿಸೆಂಬರ್ ೧೪) ರ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಇದುವರೆಗೆ ಪಂಚಲಿಂಗದರ್ಶನವೆಂದರೆ ಇಡೀ ಭಕ್ತ ಸಮೂಹ ಪುಳಕಗೊಳ್ಳುತ್ತಿತ್ತು. ಆದರೆ ಈ ಬಾರಿ ಕೊರೋನಾದಿಂದಾಗಿ ಆ ಸಂಭ್ರಮಕ್ಕೆ ತಣ್ಣೀರು ಎರಚಿದಂತಾಗಿದೆ - Kannada News

(Kannada News) : ಮತ್ತೆ ತಲಕಾಡಿನಲ್ಲಿ ಪಂಚಲಿಂಗ ದರ್ಶನ (ಡಿಸೆಂಬರ್ ೧೪) ರ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಇದುವರೆಗೆ ಪಂಚಲಿಂಗದರ್ಶನವೆಂದರೆ ಇಡೀ ಭಕ್ತ ಸಮೂಹ ಪುಳಕಗೊಳ್ಳುತ್ತಿತ್ತು. ಆದರೆ ಈ ಬಾರಿ ಕೊರೋನಾದಿಂದಾಗಿ ಆ ಸಂಭ್ರಮಕ್ಕೆ ತಣ್ಣೀರು ಎರಚಿದಂತಾಗಿದೆ. ಆದರೂ ಪಂಚಲಿಂಗದ ದರ್ಶನದ ಮಹತ್ವ ಮತ್ತು ತಲಕಾಡಿನ ಇತಿಹಾಸವನ್ನು ಈ ಸಂದರ್ಭ ಮೆಲುಕು ಹಾಕಲೇ ಬೇಕಾಗಿದೆ.

ಪಂಚಲಿಂಗ ದರ್ಶನ: ಮಹತ್ವ ಮತ್ತು ತಲಕಾಡಿನ ಇತಿಹಾಸ

ತಲಕಾಡು ಎಂದ ತಕ್ಷಣ ಮೈನವಿರೇಳುತ್ತದೆ. ಅದಕ್ಕೆ ಕಾರಣ ಪೌರಾಣಿಕ ಮತ್ತು ಐತಿಹಾಸಿಕವಾಗಿ ಈ ಸ್ಥಳ ಪ್ರಸಿದ್ಧಿಯಾಗಿದೆ.

ಜೊತೆಗೆ ನಿಸರ್ಗ ಸುಂದರತೆ ಇಲ್ಲಿ ತಾಂಡವವಾಡುತ್ತಿದ್ದು ಹಾಗೆ ಸುಮ್ಮನೆ ಕಣ್ಣು ಹಾಯಿಸಿದರೆ ಸಾಕು ಸುತ್ತಲೂ ಹಸಿರಿನಿಂದ ಕಂಗೊಳಿಸುವ ನಿಸರ್ಗಸಿರಿ, ಮರಳ ರಾಶಿ ನಡುವಿನ ದೇವಾಲಯಗಳು, ವಿಶಾಲವಾಗಿ ಹರಡಿ ಹರಿಯುವ ಕಾವೇರಿ ನದಿಯ ಚೆಲುವು ಮನಪುಳಕಗೊಳಿಸುತ್ತದೆ.

ಕಾವೇರಿಯು ಇಲ್ಲಿ ಶಿವ ಕ್ಷೇತ್ರ ಮತ್ತು ವಿಷ್ಣುಕ್ಷೇತ್ರವನ್ನು ಸೃಷ್ಟಿಸಿದ್ದು ಚತುರ್ (ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ) ವಾಹಿನಿಯಾಗಿ ಹರಿಯುವುದು ವಿಶೇಷವಾಗಿದೆ.

ತಲಕಾಡಿನಲ್ಲಿ ಘಟಿಸುತ್ತಿದೆ, ಅಪರೂಪದ ಪಂಚಲಿಂಗ ದರ್ಶನ - Kannada News
ತಲಕಾಡಿನಲ್ಲಿ ಘಟಿಸುತ್ತಿದೆ, ಅಪರೂಪದ ಪಂಚಲಿಂಗ ದರ್ಶನ

ಮೈಸೂರಿನಿಂದ ಸುಮಾರು ಅರುವತ್ತು ಕಿ.ಮೀ. ದೂರದಲ್ಲಿರುವ ತಲಕಾಡು ತಿ.ನರಸೀಪುರ ತಾಲೂಕಿಗೆ ಸೇರಿದೆ. ಭಕ್ತರಿಗೆ ಪವಿತ್ರ ತಾಣವಾಗಿ ಪ್ರವಾಸಿಗರಿಗೆ ಚೆಲುವಿನ ತಾಣವಾಗಿ ಗಮನಸೆಳೆಯುತ್ತದೆ.

ಸೋಮದತ್ತ ಋಷಿ ಮತ್ತು ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಗಜಾರಣ್ಯ ಕ್ಷೇತ್ರ, ಸಿದ್ಧಾರಣ್ಯ ಕ್ಷೇತ್ರವೆಂದೂ, ಗಂಗರ ರಾಜಧಾನಿಯಾಗಿ ಬಳಿಕ ಚೋಳರ ಅಧೀನಕ್ಕೆ ಬಂದಾಗ ರಾಜರಾಜಪುರ ಎಂದೂ, ಇದಾದ ನಂತರ ತಲ ಮತ್ತು ಕಾಡ ಎಂಬ ಬೇಡರು ಇಲ್ಲಿರುವ ವೈದ್ಯನಾಥೇಶ್ವರನನ್ನು ಆರಾಧಿಸಿ ಮೋಕ್ಷ ಪಡೆದಿದ್ದರಿಂದ ತಲಕಾಡು ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ.

ಇತಿಹಾಸ ಪುಟದಲ್ಲಿ ಪಂಚಲಿಂಗ ದರ್ಶನ

ಇನ್ನು ಇತಿಹಾಸದ ಪುಟಗಳನ್ನು ತಿರುವಿದರೆ ಪಶ್ಚಿಮ ಗಂಗರು ಕ್ರಿ.ಶ. ಸುಮಾರು ಆರನೇ ಶತಮಾನದಿಂದ ಹತ್ತನೇ ಶತಮಾನದ ಕೊನೆವರೆಗೂ ತಲಕಾಡನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ನಡೆಸಿ ತಲಕಾಡು ಗಂಗರೆಂದೇ ಹೆಸರುವಾಸಿಯಾದರು.

ಆದರೆ ಹತ್ತನೇ ಶತಮಾನದ ಕೊನೆಯ ಭಾಗದಲ್ಲಿ ತಲಕಾಡು ಹಾಗೂ ಸುತ್ತಮುತ್ತಲ ಪ್ರಾಂತ್ಯಗಳನ್ನು ಚೋಳ ಚಕ್ರವರ್ತಿ ರಾಜರಾಜ ಚೋಳನು ತನ್ನ ವಶಕ್ಕೆ ತೆಗೆದುಕೊಂಡನು ಎಂದು ಹೇಳಲಾಗುತ್ತಿದೆ.

ಆ ನಂತರ ಸುಮಾರು ೧೩೦ ವರ್ಷಗಳ ಕಾಲಚೋಳರು ಆಳ್ವಿಕೆ ನಡೆಸಿದರೆಂದೂ ೧೧೧೭ರಲ್ಲಿ ಹೊಯ್ಸಳ ವಿಷ್ಣುವರ್ಧನ ಚೋಳರನ್ನು ಯುದ್ಧದಲ್ಲಿ ಸೋಲಿಸಿ ಅಧಿಪತ್ಯ ಸ್ಥಾಪಿಸಿದ್ದರಿಂದ ತಲಕಾಡುಗೊಂಡ ಎಂಬ ಬಿರುದು ಪಡೆದನೆಂದೂ ಆ ನಂತರ ಮೈಸೂರು ಒಡೆಯರ್ ಆಳ್ವಿಕೆ ನಡೆಸಿದರೆಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ತಲಕಾಡಿಗೆ ಭೇಟಿ ನೀಡುವವರಿಗೆ ಇಲ್ಲಿನ ಮರಳು ರಾಶಿಗಳು ವಿಸ್ಮಯ ಮೂಡಿಸುತ್ತವೆ. ಇದು ಈ ಕ್ಷೇತ್ರದ ಆಕರ್ಷಣೆಯೂ ಹೌದು.

ಪಂಚಲಿಂಗ ದರ್ಶನ
ಪಂಚಲಿಂಗ ದರ್ಶನ

ಇಲ್ಲಿ ಹರಿದು ಹೋಗುವ ಕಾವೇರಿ ನದಿ ದಂಡೆಯಿಂದ ಸುಮಾರು ಮೂರು ಕಿ.ಮೀ. ಒಳಭಾಗದವರೆಗೆ ನಿರ್ಮಾಣವಾಗಿರುವ ನಲವತ್ತು ಅಡಿಗಿಂತಲೂ ಎತ್ತರವಾಗಿರುವ ಮರಳಿನ ದಿಬ್ಬಗಳು ಈ ಕ್ಷೇತ್ರದ ವಿಶೇಷತೆಯನ್ನು ಸಾರುತ್ತಾ ದೂರದಿಂದ ಬರುವ ಪ್ರವಾಸಿಗರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ.

ಮೇಲ್ನೋಟಕ್ಕೆ ಮರಳ ರಾಶಿಗಳು ಪ್ರಕೃತಿಯ ಸೋಜಿಗವಾಗಿ ಕಂಡು ಬಂದರೂ ಇದು ತಲಕಾಡಿಗೆ ತಟ್ಟಿದ ಶಾಪ ಎಂದರೆ ಆಶ್ಚರ್ಯವಾಗಬಹುದು.

ತಲಕಾಡಿನ ಇವತ್ತಿನ ಮರಳರಾಶಿಯ ಹಿಂದೆ ಕಥೆಯಿದ್ದು ಅದನ್ನು ದಂತ ಕಥೆಯೆಂದು ತಳ್ಳಿ ಹಾಕಲು ಸಾಧ್ಯವಾಗುವುದಿಲ್ಲ. ಆ ಕಥೆ ಏನೆಂದರೆ ವಿಜಯನಗರ ಅರಸರು ಆಳ್ವಿಕೆ ನಡೆಸುತ್ತಿದ್ದ ಕಾಲ.

ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ಶ್ರೀರಂಗರಾಯರು ಆಳ್ವಿಕೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಮೈಸೂರು ಪ್ರಾಂತ್ಯವನ್ನು ಯದುವಂಶದ ರಾಜ ಒಡೆಯರ್ ಆಳ್ವಿಕೆ ನಡೆಸುತ್ತಿದ್ದರು.

ಒಮ್ಮೆ ಶ್ರೀರಂಗರಾಯರಿಗೆ ವಾಸಿಯಾಗದ ಕಾಯಿಲೆ(ಬೆನ್ನುಪಣೆ) ಬಂದಿದ್ದರಿಂದ ವೈದ್ಯೇಶ್ವರನ ಸೇವೆ ಮಾಡಲು ಪತ್ನಿ ಅಲಮೇಲಮ್ಮನ ಸಹಿತ ತಲಕಾಡಿಗೆ ಬರುತ್ತಾರೆ.

ಆದರೆ ಇದೇ ಸಮಯದಲ್ಲಿ ಕಾಯಿಲೆ ಇನ್ನಷ್ಟು ಉಲ್ಭಣಗೊಂಡು ಮರಣ ಹೊಂದುತ್ತಾರೆ. ಇದಾದ ಬಳಿಕ ಶ್ರೀರಂಗರಾಯರ ಬಳಿಯಿದ್ದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ರಾಜ ಒಡೆಯರ್ ಸೈನ್ಯ ಸಮೇತವಾಗಿ ತಲಕಾಡಿಗೆ ಬರುತ್ತಾರೆ.

ಈ ವಿಷಯ ತಿಳಿದ ಅಲಮೇಲಮ್ಮ ರಾಜ ಒಡೆಯರ್ ನಿಂದ ತನ್ನ ಪಾವಿತ್ರ್ಯಕ್ಕೆ ಧಕ್ಕೆ ಬರಬಹುದು ಎಂಬ ಭಯದಿಂದ ತನ್ನ ಬಳಿಯಿದ್ದ ಚಿನ್ನಾಭರಣಗಳನ್ನೆಲ್ಲ ಒಟ್ಟುಗೂಡಿಸಿ ತಲಕಾಡಿನ ದಕ್ಷಿಣಕ್ಕಿರುವ ಕಾವೇರಿ ನದಿಗೆ ಎಸೆದು ತಾನು ಅದಕ್ಕೆ ಹಾರಿ ಪ್ರಾಣ ಬಿಡುತ್ತಾಳೆ.

ಆದರೆ ನದಿಗೆ ಹಾರುವ ಮುನ್ನ ‘ತಲಕಾಡು ಮರಳಾಗಲಿ ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ’ ಎಂದು ಶಾಪ ಹಾಕಿದಳೆಂದೂ ಅದರಿಂದಲೇ ತಲಕಾಡು ಮರಳಿನಿಂದಾವೃತವಾಗಿದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ.

ಪಂಚಲಿಂಗ ದರ್ಶನ 1
ಪಂಚಲಿಂಗ ದರ್ಶನ

ಇನ್ನು ಇಲ್ಲಿರುವ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಮರಳೇಶ್ವರ ಎಂಬ ನಾಲ್ಕು ಶಿವದೇವಾಲಯಗಳನ್ನು ಸುತ್ತಲಿನಿಂದಲೂ ಮರಳು ಆವರಿಸಿಕೊಳ್ಳುತ್ತದೆ.

ಹೀಗಾಗಿ ಈ ದೇವಾಲಯಗಳು ಮರಳಿನಲ್ಲಿ ಹುದುಗಿ ಹೋಗುತ್ತವೆ. ಪಂಚಲಿಂಗದರ್ಶನ ಸಂದರ್ಭ ಮರಳು ತೆಗೆದು ದೇವಾಲಯಗಳಲ್ಲಿ ಪೂಜಾಕಾರ್ಯ ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಇಲ್ಲಿನ ನಾಲ್ಕು ದೇವಾಲಯಗಳಲ್ಲದೆ ಮುಡುಕುತೊರೆಯ ಮಲ್ಲಿಕಾರ್ಜುನ ದೇವಾಲಯದ ಮಲ್ಲಿಕಾರ್ಜುನೇಶ್ವರ ಲಿಂಗವೂ ಮಹತ್ವ ಪಡೆದಿದ್ದು ಈ ಲಿಂಗದ ದರ್ಶನ ಮಾಡುವುದರೊಂದಿಗೆ ಪಂಚಲಿಂಗದರ್ಶನ ಸಮಾಪ್ತಿಯಾಗುತ್ತದೆ.

ಇದೆಲ್ಲದರ ನಡುವೆ ತಲಕಾಡನ್ನು ದಕ್ಷಿಣದ ಕಾಶಿ ಎಂದು ಕರೆಯಲಾಗುತ್ತಿದ್ದು, ಕಾಶಿಯ ಮಣಿವರ್ಣಿಕಾ ಸರೋವರದಿಂದ ಗಂಗೆಯು ಪ್ರತಿ ವರ್ಷದ ತುಲಾ ಮಾಸದಲ್ಲಿ ಒಂದು ತಿಂಗಳುಗಳ ಕಾಲ ತಲಕಾಡಿನ ಗೋಕರ್ಣಕ್ಕೆ ತೀರ್ಥರೂಪದಲ್ಲಿ ಪ್ರವೇಶಿಸಿ ನೆಲೆ ನಿಲ್ಲುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ.

ಪಂಚಲಿಂಗ ದರ್ಶನ – ಹಲವು ಮಹತ್ವ

ಇನ್ನು ಪಂಚಲಿಂಗ ದರ್ಶನದ ಬಗ್ಗೆ ಅರಿಯುತ್ತಾ ಹೋದರೆ ಇದರ ಹಿಂದೆ ಹಲವು ಮಹತ್ವ ಇರುವುದನ್ನು ಕಾಣಬಹುದಾಗಿದೆ. ವಸಿಷ್ಠ ಗೋತ್ರದ ಸೋಮದತ್ತನೆಂಬ ಮುನಿಪುಂಗವ ಮತ್ತು ಆತನ ಶಿಷ್ಯರಿಗೆ ತಲಕಾಡಿನಲ್ಲಿರುವ ಪಂಚಲಿಂಗಗಳಲ್ಲಿ ಒಂದಾದ ಶ್ರೀ ವೈದ್ಯನಾಥೇಶ್ವರನು ಏಕ ಕಾಲದಲ್ಲಿ ಮೋಕ್ಷವಿತ್ತ ದಿನವೇ ಪಂಚಲಿಂಗ ದರ್ಶನದ ದಿನವಾಗಿದೆ ಎಂದು ಹೇಳಲಾಗಿದೆ.

ಇದಲ್ಲದೆ, ಕಾಶಿ ವಿಶ್ವನಾಥನು ಸೋಮದತ್ತ ಮತ್ತು ಶಿಷ್ಯರಿಗೆ ಹಾಗೂ ತಲ- ಕಾಡ ಎಂಬ ಬೇಡರಿಗೆ ಸಾಮೂಹಿಕ ಮೋಕ್ಷ ನೀಡಲೆಂದು ಶ್ರೀ ವೈದ್ಯೇಶ್ವರನ ರೂಪದಲ್ಲಿ ಬಂದು ಕಾವೇರಿ ನದಿ ತಟದ ಬೂರುಗ ಮರದ ಕೆಳಗೆ ನೆಲೆಸಿ ಮೋಕ್ಷ ನೀಡಿದಲ್ಲದೆ, ಭಕ್ತರಿಗೆ ಮೋಕ್ಷ ನೀಡಲೆಂದೇ ಪ್ರಧಾನ ಮುಖವಾದ ಈಶಾನ ಮುಖದಿಂದ ಶ್ರೀ ವೈದ್ಯನಾಥೇಶ್ವರ, ಪೂರ್ವ ಮುಖವಾದ ತತ್ಪುರುಷ ಮುಖದಿಂದ ಶ್ರೀ ಅರ್ಕೇಶ್ವರ, ಅಘೋರ ಮುಖದಿಂದ ಪಾತಾಳೇಶ್ವರ ಸದ್ಯೋಜಾತ ಮುಖದಿಂದ ಮರಳೇಶ್ವರ ಸ್ತ್ರೀ ವಾಸುದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನಾಗಿ ನೆಲೆಗೊಂಡಿದ್ದಾಗಿ ನಂಬಿಕೆಯಿದೆ.

ಅಪರೂಪದ ಪಂಚಲಿಂಗ ದರ್ಶನ
ಅಪರೂಪದ ಪಂಚಲಿಂಗ ದರ್ಶನ

ತಲಕಾಡಿನಲ್ಲಿ ಪಂಚಲಿಂಗ ದರ್ಶನ ಯಾವಾಗ ನಡೆಯುತ್ತದೆ ?

ಪಂಚಲಿಲಿಂಗದರ್ಶನ ಹೇಗೆ ಘಟಿಸುತ್ತದೆ ಎಂಬುದನ್ನು ನೋಡುವುದಾದರೆ ಯಾವುದೇ ಸಂವತ್ಸರವಾಗಲೀ ಐದು ಕಾರ್ತಿಕ ಸೋಮವಾರದಂದು ಅಮಾವಾಸ್ಯೆ ವೃಶ್ಚಿಕಾ ಮಾಸ ಪ್ರಾತಃಕಾಲ ಕುಹೂಯೋಗ ಅಥವಾ ಪದ್ಮಕಯೋಗದಲ್ಲಿ ವಿಶಾಕ ನಕ್ಷತ್ರ ಅನುರಾಧ ಅಥವಾ ಜ್ಯೇಷ್ಠ ನಕ್ಷತ್ರ ಸೇರುವುದೋ ಆ ದಿನವೇ ತಲಕಾಡಿನಲ್ಲಿ ಪಂಚಲಿಂಗದರ್ಶನ ನಡೆಯುತ್ತದೆ. ಈ ಬಾರಿ ಡಿಸೆಂಬರ್ ೧೪ರಂದು ನಡೆಯುತ್ತಿದೆ.

ಪಂಚಲಿಂಗದರ್ಶನವನ್ನು ಹೇಗೆ ಮಾಡಬೇಕು ಎಂಬುದಕ್ಕೂ ಇಲ್ಲಿ ವಿಧಿ ವಿಧಾನಗಳಿರುವುದನ್ನು ನಾವು ನೋಡಬಹುದಾಗಿದೆ. ಪಂಚಲಿಂಗದರ್ಶನ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಭಕ್ತರು ಎದ್ದು ತಲಕಾಡಿನ ಗೋಕರ್ಣ ತೀರ್ಥದಲ್ಲಿ ಸ್ನಾನ ಮಾಡಿ ಅಲ್ಲಿಂದ ಗೋಕರ್ಣೇಶ್ವರನ ದರ್ಶನ ಮಾಡಿ ಭಕ್ತಿಯಿಂದ ನಮಿಸಿ ಬಳಿಕ ಸಮೀಪದಲ್ಲಿರುವ ಚೌಡೇಶ್ವರಿಯ ದರ್ಶನ ಮಾಡುತ್ತಾರೆ.

ನಂತರ ವೈದ್ಯೇಶ್ವರನ ಸನ್ನಿಧಿಗೆ ತೆರಳಿ ದರ್ಶನ ಮಾಡಿಕೊಂಡು ಗೋಕರ್ಣೇಶ್ವರ ಮತ್ತು ಚೌಡೇಶ್ವರಿ ದೇವಿಯ ದರ್ಶನ ಮಾಡಿ ದೇವರ ಮುಂದೆ ವರದಿಯನ್ನು ಒಪ್ಪಿಸಬೇಕು. ಬಳಿಕ ಅಕೇಶ್ವರನ ದರ್ಶನಕ್ಕೆ ಅಪ್ಪಣೆ ಪಡೆದುಕೊಳ್ಳಬೇಕು

ಇದಾದ ಬಳಿಕ ಸಮೀಪದಲ್ಲಿಯೇ ಇರುವ ಕಾವೇರಿ ಉತ್ತರವಾಹಿನಿಯಲ್ಲಿ ಸ್ನಾನ ಮಾಡಿ ಕಾವೇರಮ್ಮನನ್ನು ಪ್ರಾರ್ಥಿಸಿ ಅಕೇಶ್ವರನ ದರ್ಶನ ಮಾಡಿ ಪೂಜಿಸಿ ನಂತರ ಮತ್ತೆ ವೈದ್ಯೇಶ್ವರನ ಸನ್ನಿಧಿಗೆ ಬಂದು ಕಾವೇರಿ ಉತ್ತರವಾಹಿನಿಯಲ್ಲಿ ಸ್ನಾನ ಮಾಡಿ ಅರ್ಕೇಶ್ವರನ ದರ್ಶನ ಪಡೆದು ವರದಿಯನ್ನು ಒಪ್ಪಿಸಬೇಕು. ಹಾಗೆಯೇ ಮುಂದಿನ ಪಾತಾಳೇಶ್ವರ ದರ್ಶನಕ್ಕಾಗಿ ಅಪ್ಪಣೆಯನ್ನು ಪಡೆದುಕೊಳ್ಳಬೇಕು.

ಮತ್ತೆ ಕಾವೇರಿ ಸರ್ಪವಾಹಿನಿಯಲ್ಲಿ ಸ್ನಾನ ಮಾಡಿ ಕಾವೇರಿಯನ್ನು ಪ್ರಾರ್ಥಿಸಿ ಪಾತಾಳೇಶ್ವರನ ದರ್ಶನ ಮಾಡಿ ಪೂಜಿಸಿ ಮತ್ತೆ ವೈದ್ಯೇಶ್ವರನ ಸನ್ನಿಧಿಗೆ ಬಂದು ವರದಿ ಒಪ್ಪಿಸಿ ಮುಂದಿನ ಮರಳೇಶ್ವರನ ದರ್ಶನಕ್ಕಾಗಿ ಅಪ್ಪಣೆ ಪಡೆಯಬೇಕಾಗುತ್ತದೆ.

ಆ ನಂತರ ಕಾವೇರಿ ದಕ್ಷಿಣವಾಹಿನಿಯಲ್ಲಿ ಸ್ನಾನ ಮಾಡಿ ಕಾವೇರಿಯನ್ನು ಪ್ರಾರ್ಥಿಸಿ ಮರಳೇಶ್ವರನ ದರ್ಶನ ಮಾಡಿ ವೈದ್ಯೇಶ್ವರನ ಸನ್ನಿಧಿಗೆ ಪೂಜಾ ಕ್ರಮದ ವಿವರ ಒಪ್ಪಿಸಿ ಮುಂದಿನ ಮಲ್ಲಿಕಾರ್ಜುನೇಶ್ವರನ ದರ್ಶನಕ್ಕೆ ಅಪ್ಪಣೆ ಪಡೆಯಬೇಕು.

ಆ ನಂತರ ತಲಕಾಡಿಗೆ ಮೂರು ಕಿ.ಮೀ. ದೂರದಲ್ಲಿರುವ ಮುಡುಕುತೊರೆಗೆ ತೆರಳಿ ಅಲ್ಲಿರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಕಾವೇರಿಯನ್ನು ಪ್ರಾರ್ಥಿಸಿ ನಂತರ ಸೋಮಗಿರಿ ಪರ್ವತದಲ್ಲಿರುವ ಭ್ರಮರಾಂಬ ಸಹಿತ ಮಲ್ಲಿಕಾರ್ಜುನೇಶ್ವರನ ದರ್ಶನ ಮಾಡಿ ಪೂಜಿಸಿ ಮತ್ತೆ ವೈದ್ಯೇಶ್ವರನ ಸನ್ನಿಧಿಗೆ ತೆರಳಿ ಪೂಜಾ ವರದಿ ಅರ್ಪಿಸಿ ಬಳಿಕ ಸುಗಮವಾಗಿ, ಸಾಂಗವಾಗಿ ನೆರವೇರಿಸಿಕೊಟ್ಟಿದಕ್ಕೆ ವೈದ್ಯೇಶ್ವರನನ್ನು ಸ್ತುತಿಸಿ, ಸಮಸ್ತ ಪಾಪ ಪರಿಹಾರಕ್ಕಾಗಿ ಪ್ರಾರ್ಥಿಸಿ ಬಳಿಕ ಚೌಡೇಶ್ವರಿಯ ದರ್ಶನ ಮಾಡಿ ಕೈಲಾದ ದಾನಧರ್ಮ ಮಾಡಬೇಕು.

ಮಾರನೆಯ ದಿನ ಪ್ರಾತಃಕಾಲ ಕಾವೇರಿನದಿಯಲ್ಲಿ ಸ್ನಾನ ಮಾಡಿ ಪಿತೃದೇವತೆಗಳ ಪ್ರೀತ್ಯರ್ಥ ತೀರ್ಥ ಆಮ ಮತ್ತು ಹಿರಣ್ಯ ಶ್ರಾದ್ಧಾದಿಗಳನ್ನು ಮಾಡಿ ಅಂದೇ ನಡೆಯುವ ಮಹಾರಥೋತ್ಸವದ ದರ್ಶನ ಮಾಡಿ ಮನೆಗೆ ಮರಳಿ ಅನ್ನಸಂತರ್ಪಣೆ ಮಾಡಿದರೆ ಅಲ್ಲಿಗೆ ಪಂಚಲಿಂಗ ದರ್ಶನದ ಯಾತ್ರಾ ಕ್ರಮ ಮುಗಿದಂತೆ.

ಇದುವರೆಗೆ ನಡೆದ ಪಂಚಲಿಂಗದರ್ಶನದ ಬಗ್ಗೆ ನೋಡಿದರೆ ಕ್ರಿ.ಶ.೨೪೭ ರಿಂದ ೨೬೬ರವರೆಗೆ ತಲಕಾಡನ್ನು ಆಳಿದ ಗಂಗರ ದೊರೆ ಹರಿವರ್ಮ ಕಾಲದಲ್ಲೇ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಆಚರಣೆಯಲ್ಲಿತ್ತೆಂಬುದು ತಿಳಿದು ಬರುತ್ತದೆಯಾದರೂ ಇದಕ್ಕೆ ಯಾವುದೇ ರೀತಿಯ ಖಚಿತತೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಆದರೆ ಕಳೆದ ೨೦ನೇ ಶತಮಾನದ ಇತ್ತೀಚೆಗೆ ನಡೆದ ಪಂಚಲಿಂಗದರ್ಶನದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅದು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ೧೯೦೮, ೧೯೧೫, ೧೯೨೫, ೧೯೩೮ ಹಾಗೂ ಸ್ವಾತಂತ್ರ್ಯ ನಂತರ ೧೯೫೨, ೧೯೫೯, ೧೯೬೬, ೧೯೭೯, ೧೯೮೬, ೧೯೯೩ರಲ್ಲಿ ಪಂಚಲಿಂಗ ದರ್ಶನ ನಡೆದಿದ್ದು ೨೧ನೇ ಶತಮಾನದ ಮೊದಲ ಪಂಚಲಿAಗದರ್ಶನವಾಗಿ ೨೦೦೬ ನವೆಂಬರ್ ೨೦ ರಂದು ನಡೆದಿದೆ.

ಇದಾದ ನಂತರ ೨೦೦೯ನೇ ನವೆಂಬರ್ ೧೬ರಂದು ನಡೆದಿದೆ, ಇದಾದ ಬಳಿಕ ೨೦೧೩ರಲ್ಲಿ ಡಿಸೆಂಬರ್ ೨ ರಂದು ಪಂಚಲಿಂಗ ದರ್ಶನ ನಡೆದಿತ್ತು. ಇದೀಗ ೨೦೨೦ ಡಿಸೆಂಬರ್ ೧೪ರಂದು ನಡೆಯುತ್ತಿದೆ.

ಪಂಚಲಿಂಗದರ್ಶನವು ೧೨ ವರ್ಷಗಳಿಗೊಮ್ಮೆ ಮಾತ್ರ ನಡೆಯುತ್ತದೆ ಎಂದು ಹೇಳಲಾಗುತ್ತದೆ ಆದರೆ ಅದು ಸರಿಯಲ್ಲ ಕಾರ್ತೀಕಮಾಸ, ಅಮಾವಾಸ್ಯೆ, ಐದು ಸೋಮವಾರ, ವೃಶ್ಚಿಕರಾಶಿ, ಕಹೂಯೋಗ ಈ ಅಂಶಗಳು ಒಟ್ಟಾಗಿ ಬಂದಾಗ ಪಂಚಲಿಂಗ ದರ್ಶನ ಘಟಿಸುತ್ತದೆ ಎಂಬುದು ಸತ್ಯ.

Web Title : Panchalinga Darshana Significance and history of Talakadu