ಮಂಡ್ಯದ ಮೂರು ತಾಲೂಕುಗಳಲ್ಲಿ ಶಾಂತಿಯುತ ಮತದಾನ

ಮಂಡ್ಯ ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನ ಮಂಗಳವಾರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯಗೊಂಡಿತು.

(Kannada News) : ಮಂಡ್ಯ: ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನ ಮಂಗಳವಾರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯಗೊಂಡಿತು.

ಮಂಡ್ಯ ಉಪವಿಭಾಗದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳ 126 ಗ್ರಾಮ ಪಂಚಾಯಿತಿಗಳಲ್ಲಿ 921 ಮತಕೇಂದ್ರಗಳಲ್ಲಿ ಮತದಾನ ನಡೆಯಿತು. ಎಲ್ಲ ಮತಕೇಂದ್ರಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ಶಾಂತಿಯುತವಾಗಿ ಜರುಗಿತು.

921 ಪಿ.ಆರ್.ಓ.ಗಳು, 921 ಎ.ಪಿ.ಆರ್.ಓ, 921, 1ನೇ ಪೋಲಿಂಗ್ ಅಧಿಕಾರಿ, 921 2ನೇ ಪೋಲಿಂಗ್ ಅಧಿಕಾರಿಗಳು, 921 ಗ್ರೂಪ್ ಡಿ ನೌಕರರು, 372 ಮೀಸಲು ಪಡೆ ಸೇರಿ ಒಟ್ಟು 4977 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.

ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಕೆಲ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮತಪೆಟ್ಟಿಗೆಗೆ ಪೂಜೆ ಸಲ್ಲಿಸಿ, ತಮ್ಮ ಪರ ಮತ ಹೆಚ್ಚು ಬೀಳುವಂತೆ ಪ್ರಾರ್ಥಿಸಿದರು.

ಬೆಳಿಗ್ಗೆ ಚಳಿಯಲ್ಲಿ ಮಂದಗತಿಯಲ್ಲಿ ಆರಂಭಗೊಂಡು 10 ಗಂಟೆಯ ನಂತರ ಚುನಾವಣೆಯಲ್ಲಿ ಚುರುಕುಗೊಂಡಿತು. ಮಧ್ಯಾಹ್ನ 1ಗಂಟೆ ವೇಳೆಗೆ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿಯಲ್ಲಿ 1,39,638 ಪುರುಷರು ಹಾಗೂ 1,52,043 ಮಹಿಳೆಯರು ಮತ ಚಲಾಯಿಸಿದ್ದು ಒಟ್ಟು ಶೇ.48.25ರಷ್ಟು ಮತದಾನವಾಗಿತ್ತು.

ವಿವಿಧ ಪಕ್ಷದ ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದ ಇಂದು ಮುಂಜಾನೆಯಿಂದಲೇ ಅಂತಿಮ ಕಸರತ್ತು ನಡೆಸಿದ್ದು ಕಂಡುಬಂತು.

ಮಂಡ್ಯದ ಮೂರು ತಾಲೂಕುಗಳಲ್ಲಿ ಶಾಂತಿಯುತ ಮತದಾನ - Kannada News Today
ಮಂಡ್ಯದ ಮೂರು ತಾಲೂಕುಗಳಲ್ಲಿ ಶಾಂತಿಯುತ ಮತದಾನ

ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ಶಾಸಕ ಎಂ.ಶ್ರೀನಿವಾಸ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಮತದಾನ ಮಾಡಿದರು. ಮದ್ದೂರು ತಾಲೂಕಿನ ದೊಡ್ಡಅರಸಿನಕೆರೆ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ಶಾಸಕ ಡಿ.ಸಿ.ತಮ್ಮಣ್ಣ ತಮ್ಮ ಹಕ್ಕು ಚಲಾಯಿಸಿದರು.

ಮಾಜಿ ಶಾಸಕ, ಹಿರಿಯ ಸಹಕಾರಿ ಧುರೀಣ ಡಾ.ಎಚ್.ಡಿ.ಚೌಡಯ್ಯ, ಮಾಜಿ ಶಾಸಕ ಎಚ್.ಬಿ.ರಾಮು ಅವರು ಸ್ವಗ್ರಾಮ ಮಂಡ್ಯ ತಾಲೂಕು ಹೊಳಲು ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಕುಟುಂಬದ ಸದಸ್ಯರೊಂದಿಗೆ ತೆರಳಿದ ಮತಚಲಾಯಿಸಿದರು.

ಮೊದಲ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಮೂರು ತಾಲೂಕುಗಳಲ್ಲಿ ಅಗತ್ಯ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲಾ ಬೂತ್‌ಗಳ ಕ್ರಿಟಿಕಲ್ ಹಾಗೂ ನಾನ್ ಕ್ರಿಟಿಕಲ್ ವರ್ಗೀಕರಣ ಮಾಡಿದ್ದು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ಸೆಕ್ಟರ್ ಮೊಬೈಲ್, ಡಿಆರ್, ಕೆಎಸ್‌ಆರ್‌ಪಿ ತುಕಡಿ ನೇಮಕ ಮಾಡಲಾಗಿತ್ತು. ಗಲಾಟೆ ಹಾಗುವಂತ ಗ್ರಾಮಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ಬೆಳಿಗ್ಗೆ 7ಗಂಟೆ ಯಿಂದ ಚುನಾವಣೆ ಪ್ರಾರಂಭವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಕ್ಯಾತುಂಗೆರೆ, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಶೈಲಜಾ ತೂಬಿನಕೆರೆ ಗ್ರಾಮ ಪಂಚಾಯಿತಿ ಸೇರಿದಂತೆ ಅನೇಕ ಕಡೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮಂಡ್ಯ, ಮಳವಳ್ಳಿ, ಮದ್ದೂರು ತಾಲ್ಲೂಕಿನ 1,646 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 4,010 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿವೆ. ಡಿ.30ರಂದು ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಇನ್ನೂ 126 ಗ್ರಾಮ ಪಂಚಾಯಿತಿಗಳ 2011 ಸ್ಥಾನಗಳಲ್ಲಿ, 364 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿಯ 698, ಪರಿಶಿಷ್ಟ ಪಂಗಡದ 152, ಹಿಂದುಳಿದ ಅ ವರ್ಗದ 678, ಹಿಂದುಳಿದ ಬಿ ವರ್ಗದ 195, ಸಾಮಾನ್ಯ ವರ್ಗದ 2287 ಸೇರಿದಂತೆ 4010 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

Web Title : Peaceful voting in the three taluks of Mandya
ಮಂಡ್ಯದ ಮೂರು ತಾಲೂಕುಗಳಲ್ಲಿ ಶಾಂತಿಯುತ ಮತದಾನ

Scroll Down To More News Today