ಪಾಂಡವಪುರದ ಶಾಂತಿನಗರದ ಜನಕ್ಕೆ ಕಂಟಕವಾದ ಕೊಳಚೆ ನೀರು

ಪಟ್ಟಣದ ಶಾಂತಿನಗರದಲ್ಲಿ ಉತ್ತಮವಾದ ಚರಂಡಿಯಿಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ಹರಿಯುತ್ತಿರುವುದರಿಂದ ದುರ್ವಾಸನೆ ಬೀರುತ್ತಿದ್ದು ನಿವಾಸಿಗಳ ಪಾಲಿಗೆ ನರಕಯಾತನೆಯಾಗಿ ಪರಿಣಮಿಸಿದೆ

(Kannada News) : ಪಾಂಡವಪುರ: ಪಟ್ಟಣದ ಶಾಂತಿನಗರದಲ್ಲಿ ಉತ್ತಮವಾದ ಚರಂಡಿಯಿಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ಹರಿಯುತ್ತಿರುವುದರಿಂದ ದುರ್ವಾಸನೆ ಬೀರುತ್ತಿದ್ದು ನಿವಾಸಿಗಳ ಪಾಲಿಗೆ ನರಕಯಾತನೆಯಾಗಿ ಪರಿಣಮಿಸಿದೆ.

ಶಾಂತಿನಗರ(ಟೋರಾ ಕ್ಲಬ್ ಹಿಂಭಾಗ)ದಲ್ಲಿ ವಾಸಿಸುವ ನಿವಾಸಿಗಳು ಬಹಳಷ್ಟು ವರ್ಷಗಳ ಹಿಂದಿನಿಂದಲೇ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಸಂಕಷ್ಟದಲ್ಲಿಯೇ ಜೀವನ ಮಾಡಿಕೊಂಡು ಬರುತ್ತಿದ್ದಾರೆ.

ಇಲ್ಲಿ ವಾಸ ಮಾಡುತ್ತಿರುವ 20ಕ್ಕೂ ಹೆಚ್ಚು ನಿವಾಸಿಗಳಿಗೆ ಅಗತ್ಯ ಮೂಲ ಸೌಕರ್ಯಗಳಿಲ್ಲ. ಇಲ್ಲಿರುವ ದೊಡ್ಡ ಹಳ್ಳವೊಂದಕ್ಕೆ ಕೊಳಚೆ ನೀರು ತುಂಬಿಕೊಂಡು ಪ್ರತಿನಿತ್ಯವೂ ನಿವಾಸಿಗಳಿಗೆ ದುರ್ನಾತ ಬೀರುತ್ತಿದ್ದು ಆ ವಾಸನೆ ಸೇವಿಸಿಕೊಂಡೇ ಜೀವನ ಸಾಗಿಸುವುದು ಇಲ್ಲಿನವರಿಗೆ ಅನಿವಾರ್ಯವಾಗಿದೆ.

ಇಲ್ಲಿ ಒಂದೊಳ್ಳೆಯ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ನಾಗರಿಕರು ಪರದಾಡುವಂತಾಗಿದೆ. ದೊಡ್ಡಹಳ್ಳದಿಂದ ಬರುವ ದುರ್ವಾಸನೆ ಸಹಿಸಿಕೊಂಡೇ ನಿತ್ಯ ಬದುಕು ಸಾಗಿಸುವ ಅನಿವಾರ್ಯತೆ ಇಲ್ಲಿನವರದ್ದಾಗಿದೆ.

ಇಲ್ಲಿ ಚರಂಡಿ ನಿರ್ಮಾಣವಾಗದ ಕಾರಣ ತಮ್ಮ ಮನೆಯ ಕೊಳಚೆ ನೀರನ್ನು ಪ್ರತಿನಿತ್ಯ ಕೊಳಚೆ ನೀರಿನಿಂದ ಕೂಡಿರುವ ಈ ದೊಡ್ಡ ಹಳ್ಳಕ್ಕೆ ಬಿಡುತ್ತಿದ್ದಾರೆ.

ಕಳೆದ ಐದಾರು ವರ್ಷಗಳಿಂದಲೂ ಈ ಕೊಳಚೆ ನೀರಿನ ದೊಡ್ಡ ಹಳ್ಳ ಮುಚ್ಚುವ ಗೋಜಿಗೆ ಸ್ಥಳೀಯ ಪುರಸಭೆ ಅಧಿಕಾರಿಗಳು ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.

ಪ್ರತಿನಿತ್ಯವೂ ಕೊಳಚೆ ನೀರಿನ ಈ ದೊಡ್ಡ ಹಳ್ಳದಿಂದ ಹೊರಬರುವಂತಹ ದುರ್ವಾಸನೆಯನ್ನೇ ಕುಡಿಯುತ್ತಾ ಸಾಂಕ್ರಾಮಿಕ ಕಾಯಿಲೆ ಹಾಗೂ ಮಾರಾಣಾಂತಿಕ ರೋಗಗಳನ್ನು ಆಹ್ವಾನಿಸುತ್ತಿರುವ ಇಲ್ಲಿನ ನಿವಾಸಿಗಳ ಅಸಹಾಯಕತೆ ಕೇಳುವವರೇ ಇಲ್ಲದಂತಾಗಿದೆ.

ಈ ದೊಡ್ಡ ಹಳ್ಳ ಮುಚ್ಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಈಗಲಾದರೂ ಪುರಪಿತೃಗಳು ಹಾಗೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಕೊಳಚೆ ನೀರಿನಿಂದ ಆವೃತ್ತವಾಗಿರುವ ದೊಡ್ಡ ಹಳ್ಳವನ್ನು ಮುಚ್ಚಿಸಿ ರಸ್ತೆ, ಚರಂಡಿ ನಿರ್ಮಿಸಿಕೊಡುವ ಮೂಲಕ ಶಾಂತಿನಗರ ನಿವಾಸಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಯಾಗಿರುವ ಗೋವಿಂದೇಗೌಡ ಎಂಬುವರು ಪಾಂಡವಪುರ ಪಟ್ಟಣದ ಶಾಂತಿನಗರದ ಟೋರಾ ಕ್ಲಬ್ ಹಿಂಭಾಗದಲ್ಲಿ ಕಳೆದ ಹತ್ತಾರು ವರ್ಷಗಳಿಂದಲೂ ಈ ದೊಡ್ಡ ಹಳ್ಳವಿದ್ದು, ಈ ಹಳ್ಳವು ಕೊಳಚೆ ನೀರಿನಿಂದ ಆವೃತ್ತವಾಗಿದೆ.

ಪ್ರತಿದಿನವೂ ಇದರ ದುರ್ವಾಸನೆ ಕುಡಿಯಬೇಕಾಗಿದೆ. ಇಷ್ಟಾದರೂ ಪುರಸಭೆ ಅಧಿಕಾರಿಗಳು ಈ ಹಳ್ಳ ಮುಚ್ಚಿಸುತ್ತಿಲ್ಲ. ಕನಿಷ್ಟ ಚರಂಡಿ ನಿರ್ಮಾಣ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ.

ಇದರಿಂದಾಗಿ ಬದುಕು ಯಾತನಮಯವಾಗಿದೆ. 5 ವರ್ಷಕ್ಕೊಮ್ಮೆ ನಮ್ಮಿಂದ ಮತ ಕೇಳಲು ಬರುವ ಪುರಸಭೆ ಸದಸ್ಯರು ಇತ್ತ ಕಡೆಗೆ ತಿರುಗಿಯೂ ನೋಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Web Title : people are struggling in Shanti Nagar of Pandavapura from sewage water