ಕೆ.ಆರ್.ಪೇಟೆ ಕೆಇಬಿ ಕಚೇರಿ ಆವರಣ ಸ್ವಚ್ಛಗೊಳಿಸಲು ಆಗ್ರಹ

ಪಟ್ಟಣದ ಹೃದಯಭಾಗದಲ್ಲಿರುವ ಹಳೆ ಕೆಇಬಿ ಕಚೇರಿಯ ಆವರಣದಲ್ಲಿ ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿದ್ದು ವಿಷ ಜಂತುಗಳ ಆವಾಸ ತಾಣವಾಗಿ ಮಾರ್ಪಟ್ಟಿದ್ದರೂ ಸ್ವಚ್ಛಗೊಳಿಸುವ ಕಾರ್ಯಕ್ಕೆ ಸಂಬಂಧಿಸಿದವರು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

(Kannada News) : ಕೆ.ಆರ್.ಪೇಟೆ: ಪಟ್ಟಣದ ಹೃದಯಭಾಗದಲ್ಲಿರುವ ಹಳೆ ಕೆಇಬಿ ಕಚೇರಿಯ ಆವರಣದಲ್ಲಿ ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿದ್ದು ವಿಷ ಜಂತುಗಳ ಆವಾಸ ತಾಣವಾಗಿ ಮಾರ್ಪಟ್ಟಿದ್ದರೂ ಸ್ವಚ್ಛಗೊಳಿಸುವ ಕಾರ್ಯಕ್ಕೆ ಸಂಬಂಧಿಸಿದವರು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಮುಖ್ಯ ರಸ್ತೆಯಿಂದ ಕೆಇಬಿ ಕಚೇರಿಯವರೆಗೆ ನಡೆದುಕೊಂಡು ಹೋಗಲು ಹಾಗೂ ಕಾರು ಮತ್ತು ದ್ವಿಚಕ್ರವಾಹನಗಳಲ್ಲಿ ಹೋಗಲು ಸಾಧ್ಯವಾಗದಷ್ಟು ರಸ್ತೆ ಹದಗೆಟ್ಟಿದ್ದು, ರಸ್ತೆಗೆ ಹಾಕಲಾಗಿದ್ದ ಕಲ್ಲುಗಳು ಎದ್ದು ಬಂದು ರಸ್ತೆಯ ಸ್ವರೂಪವೇ ಬದಲಾಗಿದೆ.

ಈ ರಸ್ತೆಯಲ್ಲಿ ತೆರಳಲು ಸರ್ಕಸ್ ಮಾಡುವಂತಾಗಿದೆ. ಆದರೂ ಸಂಬಂಧಿಸಿದವರು ಈ ರಸ್ತೆಯನ್ನು ದುರಸ್ತಿ ಮಾಡಿಸುವ ಕಾರ್ಯಕ್ಕೆ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.

ಕಛೇರಿಗೆ ಪ್ರತಿ ದಿನವೂ ವಿದ್ಯುತ್ ಶುಲ್ಕ ಪಾವತಿಸಲು ನೂರಾರು ಸಂಖ್ಯೆಯಲ್ಲಿ ರೈತರು ಸೇರಿದಂತೆ ಗ್ರಾಹಕರು ಆಗಮಿಸುತ್ತಾರೆ. ಅವರಿಗೆ ವಿಶ್ರಮಿಸಲು ಸ್ಥಳವೇ ಇಲ್ಲದಾಗಿದೆ.

ಕೆ.ಆರ್.ಪೇಟೆ ಕೆಇಬಿ ಕಚೇರಿ ಆವರಣ ಸ್ವಚ್ಛಗೊಳಿಸಲು ಆಗ್ರಹ
ಕೆ.ಆರ್.ಪೇಟೆ ಕೆಇಬಿ ಕಚೇರಿ ಆವರಣ ಸ್ವಚ್ಛಗೊಳಿಸಲು ಆಗ್ರಹ

ಇನ್ನು ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯಂತು ಇಲ್ಲವೇ ಇಲ್ಲ. ಇರುವ ಒಂದು ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿದ್ದು ದುರ್ನಾತ ಬೀರುತ್ತಿದೆ.

ಕಚೇರಿಗೆ ಹೊಂದಿಕೊಂಡಂತೆ ಸುಮಾರು ೨ರಿಂದ೩ ಎಕರೆಯಷ್ಟು ಸ್ಥಳವಿದ್ದು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ರಸ್ತೆಯ ಎಡಬಲದ ಜಾಗದಲ್ಲಿ ಯಾರೂ ಓಡಾಡಲು ಆಗದಂಥಹ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಬೆಳೆದಿರುವ ಪೊದೆಯೊಳಗೆ ಚಿರತೆ, ಸೇರಿದಂತೆ ಯಾವುದೇ ಕಾಡು ಪ್ರಾಣಿಗಳು ಸೇರಿಕೊಂಡರೂ ಕಾಣದಷ್ಟು ಎತ್ತರಕ್ಕೆ ಹಾಗೂ ಪೊದೆಯಂತೆ ಗಿಡಗಳು ಬೆಳೆದು ನಿಂತಿವೆ.

ಇನ್ನು ಕಚೇರಿಯ ಹಿಂಬದಿಯಲ್ಲಿ ನೌಕರರಿಗಾಗಿ ನಿರ್ಮಿಸಲಾಗಿರುವ ಮನೆಗಳ ಆವರಣದಲ್ಲಿ ಪಾರ್ಥೇನಿಯಂ ಆವರಿಸಿಕೊಂಡಿದ್ದರೂ ಅನಿವಾರ್ಯವಾಗಿ ಅದರ ಕಡೆಗೆ ಗಮನ ನೀಡದೆ, ಕುರುಚಲು ಕಾಡುಗಳ ನಡುವೆಯೇ ಓಡಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಪಾರ್ಥೇನಿಯಂ ಗಿಡಗಳು ಗುಂಪಾಗಿ ಬೆಳೆದಿದ್ದರೂ ಇದರ ನಡುವೆ ಹಾವು ಚೇಳುಗಳಿದ್ದು ಈ ರಸ್ತೆಯ ಸುತ್ತಮುತ್ತಲ ವ್ಯಾಪ್ತಿಯ ಮನೆಗಳಲ್ಲಿ ವಾಸಿಸುವವರು ಭಯದಲ್ಲಿ ತಿರುಗಾಡಬೇಕಾಗಿದೆ.

ಇನ್ನಾದರೂ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ಕಚೇರಿಯ ಆವರಣದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 – ಬಿ ಎಂ ಲವಕುಮಾರ್

Web Title : Request to clean the premises of KR Pete KEB Office

Scroll Down To More News Today