ಶಿಕ್ಷಣಕ್ಕೆ ಒತ್ತು ನೀಡಿದರೆ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ: ಸಚಿವ ಸುರೇಶ್ ಕುಮಾರ್
Social development can only be done with emphasis on education, Minister Suresh Kumar
ಕನ್ನಡ ನ್ಯೂಸ್ ಟುಡೇ – Shimoga News
ಶಿವಮೊಗ್ಗ : ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡುವ ಸಮಾಜ ಅಭಿವೃದ್ಧಿ ಹೊಂದಿದ ಸಮಾಜವಾಗುವುದರಲ್ಲಿ ಸಂದೇಹವಿಲ್ಲ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದರು.
ಅವರು ಇಂದು ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ಮಿಸಿರುವ 22ಶಾಲಾ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲಿ ರಾಜ್ಯದ ಮುಂದಿನ ಸಂಗತಿಗಳು ನಿಂತಿವೆ. ವಿಶೇಷವಾಗಿ ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿಯವರು ಕಳೆದು ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪರೀಕ್ಷಾ ಪೇ ಚರ್ಚಾ ಎಂಬ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗಿನ ಸಮಾಲೋಚನೆ ಕಾರ್ಯಕ್ರಮಕ್ಕೆ ರಾಜ್ಯದ 42ವಿದ್ಯಾರ್ಥಿಗಳು, ಅದರಲ್ಲೂ ರಾಜ್ಯದ ಸರ್ಕಾರಿ ಶಾಲೆಯ 27ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ವಿಶೇಷ ಎಂದವರು ನುಡಿದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳನ್ನು ದಾಖಲಿಸುವ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಶಾಲೆಗಳ ದಾಖಲಾತಿಗೆ ಪೋಷಕರು ನೀಡುತ್ತಿರುವ ಲಕ್ಷಾಂತರ ರೂಪಾಯಿಗಳ ಡೊನೇಶನ್ ಹಾವಳಿ ಅಂತ್ಯಗೊಳ್ಳಲಿದೆ. ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇನ್ನಷ್ಟು ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಆಗ ಸಹಜವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಪೋಷಕರ ಆಶಯ ಈಡೇರಲಿದೆ ಎಂದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಹೆಚ್ಚಿಸುವಲ್ಲಿ ಶಾಲಾ ಶಿಕ್ಷಕರು ಮಕ್ಕಳ ಕಡೆಗೆ ವಿಶೇಷ ಗಮನಹರಿಸುತ್ತಿದ್ದಾರೆ. ಮಾತ್ರವಲ್ಲ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳ ಮನೆಗೆ ತೆರಳಿ ಶಿಕ್ಷಣದ ಕುರಿತು ಅರಿವು ಮೂಡಿಸುತ್ತಿದ್ದಾರೆ ಎಂದ ಅವರು ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸಿ. ಅವರನ್ನು ಪ್ರೀತಿಯಿಂದ ಕಾಣಬೇಕು. ಇದರಲ್ಲಿ ರಾಜ್ಯದ ಭವಿಷ್ಯ ಅಡಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ತಾಲೂಕಿನ 72ಗ್ರಾಮಗಳ ಸರ್ಕಾರಿ ಶಾಲೆಗಳಿಗೆ 104ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಇಂದು 22ಕೊಠಡಿಗಳನ್ನು ಉದ್ಘಾಟನೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆಯಿಂದ ಬಾಧಿತವಾಗಿರುವ ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿಗೆ ಸರ್ಕಾರ 34ಕೋ.ರೂ.ಗಳ ಅನುದಾನ ಮಂಜೂರು ಮಾಡಿದೆ. ಆ ಪೈಕಿ ತಾಲೂಕಿನ 84 ಹಿರಿಯ ಮತ್ತು ಕಿರಿಯ ಶಾಲೆಗಳು ಹಾಗೂ 05 ಪ್ರೌಢಶಾಲೆಗಳು ಸೇರಿವೆ ಎಂದರು.
ಪ್ರಸ್ತುತ ಅವಧಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣಕ್ಕೆ ಒತ್ತು ನೀಡಿದ್ದು ಅಲ್ಲಿನ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ತಾಲೂಕಿನ ಸುಮಾರು 6000ವಿದ್ಯಾರ್ಥಿಗಳು ವಸತಿ ಶಾಲೆಯ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಮಾಹೆಯಾನ 25ಸಾವಿರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದರು.
ಅಲ್ಲದೆ ತಾಲೂಕಿನ ಜನರ ಅಭ್ಯುದಯಕ್ಕಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಸುಮಾರು 850ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಶಾಶ್ವತ ಕುಡಯುವ ನೀರಿನ ಸೌಲಭ್ಯ ಒದಗಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ತಾಲೂಕಿನ ಎಲ್ಲಾ ಹೋಬಳಿಗಳಿಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.////
Quick Links : Shimoga News Kannada
Follow us On
Google News |