ಸಾಲ ತೀರಿಸಲಾಗದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕೃಷಿಗೆಂದು ಸಾಲ ಮಾಡಿ ಬಳಿಕ ಅದನ್ನು ತೀರಿಸಲಾಗದೆ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಐಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

(Kannada News) : ಕೆ.ಆರ್.ಪೇಟೆ: ಕೃಷಿಗೆಂದು ಸಾಲ ಮಾಡಿ ಬಳಿಕ ಅದನ್ನು ತೀರಿಸಲಾಗದೆ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಐಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ರೈತ ಕಾಂತರಾಜು (೩೩) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ತನ್ನ ಜಮೀನಿನಲ್ಲಿ ಕೃಷಿ ಮಾಡುವ ಸಲುವಾಗಿ ಎರಡೂವರೆ ಲಕ್ಷ ರೂಪಾಯಿಗಳ ಕೈಸಾಲ ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘಗಳಲ್ಲಿ ಐವತ್ತು ಸಾವಿರ ರೂಪಾಯಿಗಳ ಸಾಲ ಮಾಡಿದ್ದನು.

ಆದರೆ ಮಾಡಿದ ಕೃಷಿ ಕೈ ಹಿಡಿಯಲಿಲ್ಲ. ಹೀಗಾಗಿ ಮಾಡಿದ ಸಾಲದ ಅಸಲು ತೀರಿಸುವುದು ಇರಲಿ ಬಡ್ಡಿ ಕಟ್ಟಲಾರದ ಪರಿಸ್ಥಿತಿ ನಿರ್ಮಾಣವಾಯಿತು.

ಜತೆಗೆ ಸಾಲ ಕೊಟ್ಟವರು ಕೇಳಲಾರಂಭಿಸಿದ್ದರು. ಇದರಿಂದ ಬೇಸತ್ತಿದ್ದ ಕಾಂತರಾಜು ತನ್ನ ಜಮೀನಿಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಪತ್ನಿ ನಂದಿನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ವಾರಸುದಾರರಿಗೆ ನೀಡಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಎಂ.ಶಿವಮೂರ್ತಿ, ಗ್ರಾಮಾಂತರ ಠಾಣೆಯ ಪಿಎಸೈ ಸುರೇಶ್ ಭೇಟಿ ನೀಡಿ ಮಹಜರು ನಡೆಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Web Title : The farmer commits suicide