Welcome To Kannada News Today

ಚಂಡಮಾರುತದಿಂದ ಭತ್ತ ಬೆಳೆದ ರೈತರಿಗೆ ಸಂಕಷ್ಟ

ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಆಗಿಂದಾಗ್ಗೆ ಸುರಿಯುತ್ತಿರುವ ತುಂತುರು ಸಂಕಷ್ಟ ತಂದೊಡ್ಡಿದ್ದು, ಭತ್ತ ಕಟಾವಿಗೆ ಮುಂದಾಗಿರುವ ರೈತರು, ರೇಷ್ಮೆ ಬೆಳೆಗಾರರು, ಚಂಡಮಾರುತದ ಹಿನ್ನೆಲೆಯಲ್ಲಿ ಪರಿತಪಿಸುವಂತಾಗಿದೆ.

(Kannada News) : ಮದ್ದೂರು : ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಆಗಿಂದಾಗ್ಗೆ ಸುರಿಯುತ್ತಿರುವ ತುಂತುರು ಸಂಕಷ್ಟ ತಂದೊಡ್ಡಿದ್ದು, ಭತ್ತ ಕಟಾವಿಗೆ ಮುಂದಾಗಿರುವ ರೈತರು, ರೇಷ್ಮೆ ಬೆಳೆಗಾರರು, ಚಂಡಮಾರುತದ ಹಿನ್ನೆಲೆಯಲ್ಲಿ ಪರಿತಪಿಸುವಂತಾಗಿದೆ.

ಈಗಾಗಲೇ ತುಂತುರು ಮಳೆ ಸುರಿದಿದ್ದರಿಂದ ಕಟಾವಿಗೆ ಬಂದ ರಾಗಿ, ಜೋಳ, ಭತ್ತ ಬೆಳೆಗಾರರು ಕೊಯ್ಲು ಮಾಡಲು ಸಾಧ್ಯವಾಗದೆ ಹಿಡಿಶಾಪ ಹಾಕುವಂತಾಯಿತು.

ತಾಲೂಕಿನಾದ್ಯಂತ ಭತ್ತ ಕಟಾವು ಕಾರ್ಯ ಆರಂಭಗೊಂಡಿದ್ದರೂ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಕಟಾವು ಕಾರ್ಯದಿಂದ ವಿಮುಖರಾಗಿದ್ದು ಜಮೀನುಗಳಲ್ಲೇ ಭತ್ತದ ಬೆಳೆ ನೆಲಕಚ್ಚುವ ಪರಿಸ್ಥಿತಿ ಬಂದೊದಗಿದೆ.

ಕಳೆದ ಆರು ತಿಂಗಳಿಂದ ಸಾಲಸೋಲ ಮಾಡಿ ಬೆಳೆದ ಬೆಳೆಯು ರೈತರ ಕೈಗೆ ಸಿಗದೆ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಜತೆಗೆ ಕಾರ್ಮಿಕರ ಸಮಸ್ಯೆಯೂ ತಲೆದೋರಿದ್ದು ರೈತರು ತಲೆಮೇಲೆ ಕೈಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿಯಲ್ಲಿ ರೈತರಿದ್ದಾರೆ.

ಈಗಾಗಲೇ ನೆರೆ ರಾಜ್ಯ ತಮಿಳುನಾಡಿನ ಭತ್ತ ಕಟಾವು ಯಂತ್ರಗಳು ಆಗಮಿಸಿದ್ದರೂ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಕಾರ್ಯ ಕೈಗೊಳ್ಳದಂತಹ ಪರಿಸ್ಥಿತಿ ಎದುರಾಗಿದ್ದು ಭತ್ತದ ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಭತ್ತದ ಬೆಳೆ ನಷ್ಟಕ್ಕೊಳಗಾಗುವ ಭೀತಿ ಎದುರಾಗಿದೆ.

  • – ಬಿ ಎಂ ಲವಕುಮಾರ್ 
Contact for web design services Mobile