Welcome To Kannada News Today

ಕುಡುಕರ ಅಡ್ಡೆಯಾದ ಕೆ.ಆರ್.ಪೇಟೆ ಕ್ರೀಡಾಂಗಣ!

ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ಹೊಸಹೊಳಲು ರಸ್ತೆಯಲ್ಲಿರುವ ಶ್ರೀ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣಕ್ಕೆ ಕಾಯಕಲ್ಪವಿಲ್ಲದ ಕಾರಣ ರಾತ್ರಿಯಾಯಿತೆಂದರೆ ಕುಡುಕರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

(Kannada News) : ಕೃಷ್ಣರಾಜಪೇಟೆ : ಪಟ್ಟಣದ ಜಯನಗರ ಬಡಾವಣೆಯ ಹೊಸಹೊಳಲು ರಸ್ತೆಯಲ್ಲಿರುವ ಶ್ರೀ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣಕ್ಕೆ ಕಾಯಕಲ್ಪವಿಲ್ಲದ ಕಾರಣ ರಾತ್ರಿಯಾಯಿತೆಂದರೆ ಕುಡುಕರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಪ್ಪಚ್ಚುರಂಜನ್ ರಿಂದ ಉದ್ಘಾಟನೆ

ಕ್ರೀಡಾಪಟುಗಳ ಅನುಕೂಲಕ್ಕಾಗಿ ಪಟ್ಟಣಕ್ಕೊಂದು ಸುಸಜ್ಜಿತ ಕ್ರೀಡಾಂಗಣ ಬೇಕೆಂಬ ಬೇಡಿಕೆಗೆ ಸ್ಪಂದಿಸಿ ಹಿಂದೆ ಬಿಜೆಪಿ ಸರ್ಕಾರವಿದ್ದ ವೇಳೆಯಲ್ಲಿ ಆಗಿನ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ಅಪ್ಪಚ್ಚುರಂಜನ್ ಕ್ರೀಡಾಂಗಣವನ್ನು ಉದ್ಘಾಟಿಸಲಾಗಿತ್ತು.

ಆದರೆ ಅದು ದಿನದಿಂದ ದಿನಕ್ಕೆ ಕ್ರೀಡಾಂಗಣ ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕಾಗಿತ್ತಾದರೂ ಅದು ಸಂಪೂರ್ಣ ಹದಗೆಟ್ಟಿರುವುದು ಕ್ರೀಡಾಪ್ರೇಮಿಗಳಿಗೆ ನಿರಾಸೆ ತಂದಿದೆ.

ನಾಮಕಾವಸ್ಥೆಯ ಕ್ರೀಡಾಂಗಣ

ನಾಮಕಾವಸ್ಥೆಯ ಕ್ರೀಡಾಂಗಣ
ನಾಮಕಾವಸ್ಥೆಯ ಕ್ರೀಡಾಂಗಣ

ಈ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಜಾಗಿಂಗ್ ಟ್ರ್ಯಾಕ್, ಹೈಟೆಕ್ ಶೌಚಾಲಯ, ವ್ಯಾಯಾಮಶಾಲೆ, ಕಾರ್ಯಕ್ರಮ ವೀಕ್ಷಿಸಲು ಸೀಟುಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ವಿವಿಧ ಆಟೋಟಗಳ ಟ್ರ್ಯಾಕ್‌ಗಳ ಸೌಲಭ್ಯಗಳಿಲ್ಲದೆ ನಾಮಕಾವಸ್ಥೆಗೆ ಕ್ರೀಡಾಂಗಣವಾಗಿರುವುದು ನೋವಿನ ಸಂಗತಿಯಾಗಿದೆ.

ಈ ಕ್ರೀಡಾಂಗಣ ಯುವಜನರು ಹಾಗೂ ಕ್ರೀಡಾಪಟುಗಳನ್ನು ತನ್ನತ್ತ ಆಕರ್ಷಿಸ ಬೇಕಾಗಿತ್ತು. ಆದರೆ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಕ್ರೀಡಾಂಗಣವು ಸೊರಗುತ್ತಿದೆ.

ಇದನ್ನು ಅಭಿವೃದ್ಧಿ ಮಾಡಬೇಕಾದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸುತ್ತಿದೆ.

ಬಳಕೆಗೆ ಬಾರದ ಶೌಚಾಲಯ

ಬಳಕೆಗೆ ಬಾರದ ಶೌಚಾಲಯ
ಬಳಕೆಗೆ ಬಾರದ ಶೌಚಾಲಯ

ಈಗಾಗಲೇ ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಹಾಕಿರುವ ಮೇಲ್ಛಾವಣಿಯ ಶೀಟುಗಳು ಭಾರೀ ಗಾಳಿಯಿಂದಾಗಿ ಹಾರಿಹೋಗಿವೆ. ಸಾರ್ವಜನಿಕರ ಅನುಕೂಲಕ್ಕೆಂದು ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಶೌಚಾಲಯವನ್ನು ನಿರ್ಮಿಸಲಾಗಿದ್ದರೂ ಇದು ಸಾರ್ವಜನಿಕರ ಬಳಕೆಗೆ ಸಿಕ್ಕಿಲ್ಲ.

ಶೌಚಾಲಯದ ಬೀಗ ತೆಗೆಯದೆ ಇರುವುದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡಿ ಪರಿಸರ ಹಾಳಾಗುತ್ತಿದೆಯಲ್ಲದೆ, ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ. ಇದರಿಂದ ವಾಯುವಿಹಾರಕ್ಕೆ ಬರುವ ಜನರಲ್ಲಿ ಅಸಹ್ಯ ಹುಟ್ಟಿಸುತ್ತಿದೆ.

ಕ್ರೀಡಾಂಗಣಕ್ಕೆ ಸೂಕ್ತ ರಕ್ಷಣೆ ಇಲ್ಲ

ಕ್ರೀಡಾಂಗಣಕ್ಕೆ ಸೂಕ್ತ ರಕ್ಷಣೆ ಇಲ್ಲ
ಕ್ರೀಡಾಂಗಣಕ್ಕೆ ಸೂಕ್ತ ರಕ್ಷಣೆ ಇಲ್ಲ

ಕ್ರೀಡಾಂಗಣದಲ್ಲಿ ಹಲವಾರು ಕ್ರೀಡಾಕೂಟ ಸೇರಿದಂತೆ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳಿಗೆ ಆಗಮಿಸುವ ಕ್ರೀಡಾಪಟುಗಳು ಮತ್ತು ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.

ಇಲ್ಲಿ ಒಬ್ಬರು ದೈಹಿಕ ಶಿಕ್ಷಕರನ್ನು ನಿಯೋಜಿಸಿದ್ದು ಇನ್ನುಳಿದಂತೆ ಯಾವುದೇ ಖಾಯಂ ಸಿಬ್ಬಂದಿ ಇಲ್ಲದಿರುವುದರಿಂದ ಕ್ರೀಡಾಂಗಣಕ್ಕೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು, ಅನೈತಿಕ ಚಟುವಟಿಕೆಗಳಿಗೂ ದಾರಿಮಾಡಿಕೊಟ್ಟಂತಾಗಿದೆ.

ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಾಗೂ ಖೋಖೋ, ಉದ್ದಜಿಗಿತ, ಹಾಕಿ ಬಿಟ್ಟರೆ ಬೇರೆ ಬೇರೆ ಕ್ರೀಡೆಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆಗಳನ್ನು ಕಲ್ಪಿಸದಿರುವುದು ಕ್ರೀಡಾಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕಾಗಿರುವುದು ಅಗತ್ಯವಾಗಿದೆ.

ವಿಷ ಜಂತುಗಳ ಆವಾಸ ತಾಣ

ವಿಷ ಜಂತುಗಳ ಆವಾಸ ತಾಣ
ವಿಷ ಜಂತುಗಳ ಆವಾಸ ತಾಣ

ಕ್ರೀಡಾಂಗಣದ ಈಶಾನ್ಯ ಭಾಗದಲ್ಲಿ ಹುಲ್ಲು ಮಂಡಿಯುದ್ದ ಬೆಳೆದಿದ್ದು, ದನಕರುಗಳನ್ನು ಸಾಕಿದವರು ಬಂದು ಹುಲ್ಲನ್ನು ಕೊಯ್ದುಕೊಂಡು ಹೋಗುತ್ತಿದ್ದರೂ ನಿರ್ವಹಣೆಯಿಲ್ಲದೆ ವಿಷ ಜಂತುಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ.

ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕಾಗಿದೆ.

Web Title : There is no infrastructure at KR Pete Stadium

Contact for web design services Mobile