ಕೊಡಚಾದ್ರಿ-ಕೊಲ್ಲೂರು ನಡುವೆ ಕೇಬಲ್‍ಕಾರ್ ಸಂಪರ್ಕ ಕಲ್ಪಿಸಲು ಚಿಂತನೆ : ಬಿ.ವೈ.ಆರ್.
Thought to connect between Kodachadri and Kollur
ಕನ್ನಡ ನ್ಯೂಸ್ ಟುಡೇ – Shimoga News
ಶಿವಮೊಗ್ಗ : ಕೊಡಚಾದ್ರಿ ಮತ್ತು ಕೊಲ್ಲೂರು ನಡುವೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೇಬಲ್‍ಕಾರ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಕೈಗೊಳ್ಳಬಹುದಾದ ಯೋಜನೆಗಳು ಹಾಗೂ ಸಾಧ್ಯತೆ, ಸವಾಲುಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ಸುಮಾರು 32ಕಿ.ಮೀ. ದೂರದ ಅಂತರವಿದ್ದು, 11ಕಿ.ಮೀ. ಕೇಬಲ್ ಕಾರ್ ಸಂಪರ್ಕ ಅಳವಡಿಸುವುದರಿಂದ ಪ್ರಯಾಣದ ಅಂತರ ಕಡಿಮೆಯಾಗಲಿದೆ ಅಲ್ಲದೆ ಸಮಯದ ಉಳಿತಾಯವಾಗಲಿದೆ ಎಂದವರು ನುಡಿದರು.
ಈ ಭಾಗದ ಪ್ರಾಕೃತಿಕ ಸೌಂದರ್ಯಕ್ಕೆ ಕಿಂಚಿತ್ತೂ ಚ್ಯುತಿಯಾಗದಂತೆ ಹಾಗೂ ಇರುವ ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು ಅಭಿವೃದ್ಧಿಪಡಿಸಬಹುದಾದ ವಿಧಾನಗಳ ಕುರಿತು ಸಮೀಕ್ಷೆ ಮಾಡಿ ಪ್ರಸ್ತಾವನೆ ಸಲ್ಲಿಸಿದಲ್ಲಿ, ಅದನ್ನು ಪರಿಶೀಲಿಸಿ, ಪರಿಸರ, ಅರಣ್ಯ ಇಲಾಖೆಗಳಿಂದ ನಿರಾಪೇಕ್ಷಣ ಪತ್ರ ಪಡೆಯಲು ಹಾಗೂ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುವ ಬಗ್ಗೆ ಆಲೋಚಿಸಲಾಗುವುದು ಎಂದವರು ನುಡಿದರು.
ಪ್ರಸ್ತಾವಿತ ಯೋಜನೆಗೆ 1200ಕೋಟಿ ರೂ.ಗಳ ಅಂದಾಜು ವೆಚ್ಚ ತಗಲುವ ಸಾಧ್ಯತೆ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಗತ್ಯ ಸಹಕಾರ ನೀಡಿದಲ್ಲಿ ಯೋಜನೆಯನ್ನು ನಿಗಧಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಯತ್ನಿಸಲಾಗುವುದು ಎಂದು ಬೆಂಗಳೂರು ಮೀನಸ್ ಅಡ್ವೆಂಚರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಜೀರ್ ಎ.ಭಟ್ ಅವರು ಹೇಳಿದರು.
ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಸಮಾಲೋಚನೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಇದೇ ಮಾದರಿಯಲ್ಲಿ ಜೋಗ ಅಭಿವೃದ್ಧಿಗೂ ಗಮನಹರಿಸುವ ಅಗತ್ಯತೆಗಳ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಈಗಾಗಲೇ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ ಸರ್ಕಾರವು 20ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದ್ದು, ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಜಿಲ್ಲೆಯ ಜೋಗ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೆ 20ಕೋ. ಅನುದಾನವನ್ನು ಮಂಜೂರು ಮಾಡಿದೆ. ಶರಣೆ ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿಯ ಸರ್ವಾಂಗೀಣ ವಿಕಾಸಕ್ಕೆ ಹಾಗೂ ಶರಣರ ಚಳುವಳಿ ನಡೆದು ಬಂದ ಬಗೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಸದುದ್ದೇಶದಿಂದ ಉಡುತಡಿಯ ಕೋಟೆಗೆ ಹೊಂದಿಕೊಂಡಂತಿರುವ ಅರ್ಧ ಕಿ.ಮೀ. ವಿಸ್ತೀರ್ಣದಲ್ಲಿರುವ ಅಗಳವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ತಯಾರಿಸಲಾಗಿದೆ. ಈ ಅಗಳಕ್ಕೆ ಅಂಜನಾಪುರ ಜಲಾಶಯದಿಂದ ನೀರನ್ನು ತರುವ ಬಗ್ಗೆಯೂ ಚಿಂತಿಸಲಾಗಿದೆ. ಅದಕ್ಕಾಗಿ ಸುಮಾರು 5.00ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ ಎಂದರು.
ಅಂತೆಯೆ ಚಂದ್ರಗುತ್ತಿ, ಕೆಳದಿ, ನಗರಕೋಟೆ ಹಾಗೂ ಕಲ್ಲೂರು-ಮಂಡ್ಲಿ ಸಾಹಸ ಕೇಂದ್ರ ಹಾಗೂ ಕವಲೇದುರ್ಗ ಕೋಟೆ ಅಭಿವೃದ್ಧಿಗೂ ಅಗತ್ಯ ಅನುದಾನ ಮಂಜೂರು ಮಾಡಲಾಗಿದೆ ಎಂದವರು ನುಡಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಉಡುತಡಿ ಅಭಿವೃದ್ಧಿಗೆ ಸಂಬಂಧಿಸಿದ ಅಲ್ಕನ್ ಕನ್‍ಸ್ಟ್ರಕ್ಷನ್ಸ್ ಸಂಸ್ಥೆಯ ವಿನಾಯಕ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ರವಿ ಮುಂತಾದವರು ಉಪಸ್ಥಿತರಿದ್ದರು.////
Quick Links : Shimoga News Kannada
Follow us On
Google News |