ಕೊಡಗಿನಲ್ಲಿ ಪ್ರವಾಸಿಗರು ಓಡಾಡಲು ಅಡ್ಡಿಯಿಲ್ಲ, ಆದರೆ ಆಚರಣೆಗೆ ಕಡಿವಾಣ ಇರಲಿ

ಪ್ರವಾಸಿಗರು ಓಡಾಡಲು ಯಾವುದೇ ಅಡ್ಡಿಯಿಲ್ಲ ಹಾಗೂ ಯಾರನ್ನೂ ಗಡಿಗಳಲ್ಲಿ ತಡೆಯುವುದಿಲ್ಲ ಎಂದು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತ ಶಯನ ಹಾಗೂ ಕಾರ್ಯದರ್ಶಿ ಮೀನಾ ಕಾರ್ಯಪ್ಪ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ

(Kannada News) : ಮಡಿಕೇರಿ: ಹೊಸ ವರ್ಷಾಚರಣೆ ಸಂದರ್ಭ ಹೊರ ಜಿಲ್ಲೆ – ರಾಜ್ಯಗಳಿಂದ ಬರುವ ಪ್ರವಾಸಿಗರನ್ನು ಪೊಲೀಸರು ಗಡಿಯಲ್ಲಿ ತಡೆಹಿಡಿಯುತ್ತಾರಂತೆ, ರೆಸಾರ್ಟ್, ಹೋಂ ಸ್ಟೇ ಎಲ್ಲ ಮುಚ್ಚಲ್ಪಡುತ್ತಾವಂತೆ.

ಪ್ರವಾಸಿಗರ ಬುಕ್ಕಿಂಗ್‌ಗಳು ರದ್ದಾಗುತ್ತಿವೆಯಂತೆ ಎಂಬ ಊಹಾಪೋಹಗಳು ರಾಜ್ಯದ ಹಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು, ಹೋಂ ಸ್ಟೇ ಮಾಲೀಕರು ಗಲಿಬಿಲಿಗೊಂಡಿದ್ದು, ಇದು ತಪ್ಪು ತಿಳುವಳಿಕೆಯಾಗಿದ್ದು,

ಪ್ರವಾಸಿಗರು ಓಡಾಡಲು ಯಾವುದೇ ಅಡ್ಡಿಯಿಲ್ಲ ಹಾಗೂ ಯಾರನ್ನೂ ಗಡಿಗಳಲ್ಲಿ ತಡೆಯುವುದಿಲ್ಲ ಎಂದು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತ ಶಯನ ಹಾಗೂ ಕಾರ್ಯದರ್ಶಿ ಮೀನಾ ಕಾರ್ಯಪ್ಪ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದು, ಪ್ರವಾಸೋದ್ಯಮ ಚಟುವಟಿಕೆ ನಿಲ್ಲಿಸಲು ಸರಕಾರದ ಯಾವುದೇ ಆದೇಶ ಇಲ್ಲದಿರುವುದರಿಂದ, ಪ್ರವಾಸಿಗರು ಬರಲಿ, ಆದರೆ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕಡಿವಾಣ ಇರಲಿ ಎಂದು ಹೇಳಿದ್ದಾರೆ.

ಜಿಲ್ಲೆಯ ಎಲ್ಲ ಪ್ರವಾಸೀ ತಾಣಗಳೂ ಈ ಸಂದರ್ಭ ಎಂದಿನಂತೆ ತೆರೆಯಲ್ಪಟ್ಟಿರುತ್ತವೆ. ತಂಗುದಾಣಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೇರಿಸುವುದು, ಹಾಡು – ನೃತ್ಯ ಏರ್ಪಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಈ ಬಗ್ಗೆ ಹೋಂ ಸ್ಟೇ ಮಾಲೀಕರು ಗಮನ ಹರಿಸಬೇಕು ಎಂದು ಅನಂತ ಶಯನ ಹೇಳಿದ್ದಾರೆ.

ಜಿಲ್ಲೆಯಲ್ಲಿ ಅನಧಿಕೃತ ಹೋಂ ಸ್ಟೇ ಉದ್ಯಮ ಇನ್ನೂ ನಿಯಂತ್ರಿಸದಿರುವ ಬಗ್ಗೆ ಸಭೆಯಲ್ಲಿದ್ದ ಮೋಂತಿ ಗಣೇಶ್, ಅಂಬೆಕಲ್ಲು ನವೀನ್, ಧನಂಜಯ್ ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಜಿಲ್ಲೆಯಾದ್ಯಂತ ಇರುವ ಅನಧಿಕೃತ ಹೋಂ ಸ್ಟೇಗಳ ಪಟ್ಟಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಅವರ ಕಚೇರಿಯಲ್ಲಿದ್ದು, ಆಡಳಿತ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಅನಧಿಕೃತ ಹೋಂ ಸ್ಟೇಗಳು ವ್ಯವಹಾರ ನಡೆಸುತ್ತಿರುವುದು ಗಮನಕ್ಕೆ ಬಂದಲ್ಲಿ ಕೂಡಲೇ ಕಂಟ್ರೋಲ್ ರೂಂಗೆ ತಿಳಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

ಈ ಸಂದರ್ಭ ಪೊಲೀಸ್ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ನಡೆಸಲಿದೆ ಎಂದು ಪೊಲೀಸ್ ಉನ್ನತಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.

Web Title : Tourists are allowed to visit Kodagu, but no new year’s celebration