ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ; ಚರ್ಚಿಸಿ ಶೀಘ್ರ ಕ್ರಮ : ಸಚಿವ ಡಾ.ನಾರಾಯಣಗೌಡ

ಕ್ರೀಡಾಕಲಿಗಳ ತವರು ಎಂದೇ ಖ್ಯಾತವಾಗಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಸರಕಾರದ ಗಮನಕ್ಕೆ..

Online News Today Team

ಬೆಳಗಾವಿ ಸುವರ್ಣಸೌಧ, ಡಿ.17 : ಕ್ರೀಡಾಕಲಿಗಳ ತವರು ಎಂದೇ ಖ್ಯಾತವಾಗಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಸರಕಾರದ ಗಮನಕ್ಕೆ ಬಂದಿದ್ದು, ಶೀಘ್ರ ಈ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ ತಿಂಗಳ ಕೊನೆಯ ವಾರದಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದ್ದು, ಈ ಬಗ್ಗೆ ವಿವರವಾದ ಪ್ರಸ್ತಾವನೆ ಸ್ವೀಕರಿಸಿದ ನಂತರ ಸಮಾಲೋಚನೆ ನಡೆಸಲಾಗುವುದು. ಕೊಡಗು ಜಿಲ್ಲೆಯಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಸಲುವಾಗಿ 218.33ಲಕ್ಷ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಸದಸ್ಯೆ ವೀಣಾ ಅವರು ಪೊನ್ನಂಪೇಟೆ-ಸೋಮವಾರ ಪೇಟೆ ಮಧ್ಯಭಾಗದಲ್ಲಿ ಸರಕಾರಕ್ಕೆ ಸೇರಿದ 100 ಎಕರೆ ಜಮೀನು ಮೀಸಲಿದ್ದು ,ಅದನ್ನು ಬಳಸಿಕೊಂಡು ಕ್ರೀಡಾ ವಿವಿಯನ್ನು ಆದಷ್ಟು ಶೀಘ್ರ ಸ್ಥಾಪಿಸುವಂತೆ ಅವರು ಸಚಿವರಲ್ಲಿ ಕೋರಿದರು.

Follow Us on : Google News | Facebook | Twitter | YouTube