ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ವಾಹನ ಭಸ್ಮ

ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ಸಹಿತ ಮಹೇಂದ್ರ ಪಿಕಪ್ ವಾಹನ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಾಚಹೊಳಲು ಗ್ರಾಮದ ಬಳಿ ನಡೆದಿದ್ದು ಘಟನೆಯಿಂದ ಲಕ್ಷಾಂತರ ರೂ. ನಷ್ಟವಾಗಿದೆ.

(Kannada News) : ಕೃಷ್ಣರಾಜಪೇಟೆ: ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ಸಹಿತ ಮಹೇಂದ್ರ ಪಿಕಪ್ ವಾಹನ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಾಚಹೊಳಲು ಗ್ರಾಮದ ಬಳಿ ನಡೆದಿದ್ದು ಘಟನೆಯಿಂದ ಲಕ್ಷಾಂತರ ರೂ. ನಷ್ಟವಾಗಿದೆ.

ಮಹೇಂದ್ರ ಪಿಕಪ್ ವಾಹನದಲ್ಲಿ ತಾಲೂಕಿನ ಸಾಲಿಗ್ರಾಮದಿಂದ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳಿಗೆ ಭತ್ತದ ಹುಲ್ಲನ್ನು ತುಂಬಿಕೊಂಡು ತರಲಾಗುತ್ತಿತ್ತು.

ಟೆಂಪೋ ಮಾಚಹೊಳಲು ಗ್ರಾಮಕ್ಕೆ ಬರುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ತೆಯ ಬಸ್ಸಿಗೆ ಜಾಗವನ್ನು ನೀಡಲು ಪಕ್ಕಕ್ಕೆ ಸರಿದಾಗ ಹುಲ್ಲಿನ ರಾಶಿಯು ವಿದ್ಯುತ್ ತಂತಿಗೆ ತಗುಲಿದ್ದು, ಪರಿಣಾಮ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿದೆ.

ಇದನ್ನು ನೋಡಿದ ಗ್ರಾಮಸ್ಥರು ಚಾಲಕ ಶ್ರೀನಿವಾಸ್ ಮತ್ತು ಸಹಾಯಕ ರಮೇಶನನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವವರೆಗೂ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದಾರೆ.

ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕ್ಷಣಮಾತ್ರದಲ್ಲಿ ಇಡೀ ವಾಹನ ಹುಲ್ಲಿನ ಸಹಿತ ಸುಟ್ಟು ಭಸ್ಮವಾಗಿದೆ.

ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಠಾಣಾಧಿಕಾರಿ ಶ್ರೀನಿವಾಸರಾವ್ ಅವರ ನೇತೃತ್ವದಲ್ಲಿ ಬೆಂಕಿಯನ್ನು ಆರಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಈ ಬಗ್ಗೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Web Title : Vehicles gutted as dry grass catches fire