ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ ಆಧುನಿಕ ಶಿಕ್ಷಣ

students are getting modern education In Government Primary School

ಕನ್ನಡ ನ್ಯೂಸ್ ಟುಡೇ – 

ಮಡಿಕೇರಿ : ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮೈರಾಡ ಸಂಸ್ಥೆ ವತಿಯಿಂದ ನೆಕ್ಸ್ಟ್ ಎಜುಕೇಶನ್ ಯೋಜನೆಯಡಿ ಸ್ಮಾರ್ಟ್ ಕ್ಲಾಸ್ ತರಗತಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಕಂಪ್ಯೂಟರ್ಸ್ ಮೂಲಕ ತರಗತಿಯಲ್ಲಿ ಪಾಠ-ಪ್ರವಚನವನ್ನು ದೃಶ್ಯ ಮತ್ತು ಧ್ವನಿಯ ಮೂಲಕ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ಷ್ಮವಾಗಿ ಮತ್ತು ಸಮರ್ಪಕವಾಗಿ ಮನದಟ್ಟು ಮಾಡಲಾಗುತ್ತಿದೆ.

ಮೈರಾಡ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕಲ್ಪಿಸುವ ನಿಟ್ಟಿನಲ್ಲಿ 3.50 ಲಕ್ಷ ರೂ ವೆಚ್ಚದಲ್ಲಿ ಡಿಜಿಟಲ್ ಮಾನಿಟರ್ ಕೂಡ ಒದಗಿಸಿದೆ. 2 ವರ್ಷದವರೆಗೂ ಈ ಸಂಸ್ಥೆ ವತಿಯಿಂದಲೇ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಶಿಕ್ಷಕರನ್ನು ವೇತನ ಸಹಿತ ಸಂಸ್ಥೆ ನೀಡಲಿದೆ ಎಂದು ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಬಿ.ಶಿವರಾಮು ಅವರು ಮಾಹಿತಿ ನೀಡಿದ್ದಾರೆ.

ಸಿಬಿಎಸ್‍ಇ ಮತ್ತು ರಾಜ್ಯ ಶಿಕ್ಷಣದ ಎಲ್.ಕೆ.ಜಿ ಯಿಂದ 12 ನೇ ತರಗತಿವರೆಗೂ ಪಠ್ಯ ವಿಷಯಗಳಾದ ಕನ್ನಡ, ಇಂಗ್ಲೀಷ್, ಗಣಿತ ವಿಜ್ಞಾನ, ಸಮಾಜ ವಿಜ್ಞಾನಗಳನ್ನು ನೆಕ್ಸ್ಟ್ ಎಜುಕೇಶನ್ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಈ ಉಪಕರಣಗಳ ಬಳಕೆಯ ಮೂಲಕ ವಿದ್ಯಾರ್ಥಿಗಳಿಗೆ ಹೇಗೆ ಶಿಕ್ಷಣ ನೀಡಬೇಕು ಎಂಬ ಬಗ್ಗೆ ಶಾಲೆಯ ಎಲ್ಲಾ ಶಿಕ್ಷಕರಿಗೂ ಮೈರಾಡ ಸಂಸ್ಥೆಯ ವತಿಯಿಂದ ತರಬೇತಿ ನೀಡಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಾದರಿ ಶಾಲೆಯಾಗಿ ರೂಪುಗೊಳ್ಳ್ಳುತ್ತಿದೆ. ಈಗಾಗಲೇ ಬಿ.ಎಲ್ ಸಂಸ್ಥೆಯ ವತಿಯಿಂದ 2.8 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತಾ ಮಾದರಿ ಶಾಲೆಯಾಗುತ್ತಿರುವುದು ಸಂತಸದ ವಿಚಾರವಾಗಿದೆ.

ಇದರೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಹ ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಾ, 20 ಸಾವಿರ ರೂ. ವೆಚ್ಚದಲ್ಲಿ ಧ್ವನಿವರ್ಧಕ ಮತ್ತು 50 ಸಾವಿರ ರೂ. ವೆಚ್ಚದಲ್ಲಿ ನಲಿ-ಕಲಿ ವಿಭಾಗಕ್ಕೆ ಬೆಂಚುಗಳನ್ನು ಒದಗಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ಶಾಲೆಯ ಮುಖ್ಯೋಪಾದ್ಯಾಯರಾದ ಶಿವರಾಮು ಅವರು ಸ್ಮರಿಸುತ್ತಾರೆ.

ಒಟ್ಟಾರೆಯಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಎಲ್ಲಾ ಸೌಕರ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಶಿವರಾಂ ಅವರು ತಿಳಿಸಿದ್ದಾರೆ.////