ಸೋನಿಯಾ ಪರಿವಾರದ ಟ್ರಸ್ಟ್‌ಗಳ ಮೇಲೆ ಕೇಂದ್ರದ ಕಣ್ಣು

ಹೊಸದಿಲ್ಲಿ: ಕಾಂಗ್ರೆಸ್‌ ಮೇಲೆ ಗಧಾಪ್ರಹಾರಕ್ಕೆ ಸಜ್ಜಾಗಿರುವ ಕೇಂದ್ರ ಸರಕಾರ ಕೈ ಪಕ್ಷದ ಮೊದಲ ಕುಟುಂಬದ ಟ್ರಸ್ಟ್‌ಗಳ ಅಕ್ರಮಗಳ ತನಿಖೆಗೆ ಸಮನ್ವಯ ಸಮಿತಿ ನೇಮಕ ಮಾಡಿದೆ.

ರಾಜೀವ್ ಗಾಂಧಿ ಹೆಸರಿನಲ್ಲಿರುವ ಎರಡು ಹಾಗೂ ಇಂದಿರಾ ಗಾಂಧಿ ಹೆಸರಿನ ಒಂದು ಟ್ರಸ್ಟ್‌ನ ಹಣಕಾಸು ವಹಿವಾಟಿನ ತನಿಖೆಗೆ ಸಹಕಾರಿಯಾಗಿ ವಿವಿಧ ಮಂತ್ರಾಲಯಗಳ ನಡುವೆ ಸಮನ್ವಯ ಸಾಧಿಸಲು ಸಮಿತಿಯೊಂದನ್ನು ನೇಮಕ ಮಾಡಲಾಗಿದೆ.

ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ಸಮನ್ವಯ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಸಿಬಿಐ ಈ ಸಮಿತಿಯ ಭಾಗವಾಗಿರಲಿದೆ ಎಂದು ಗೃಹ ಇಲಾಖೆ ಅಧಿಕಾರಿಗಳು ಹೇಳಿರುವುದಾಗಿ ವರದಿ ಆಗಿದೆ.

ಕೇಂದ್ರದ ಖಜಾನೆಯಿಂದ ಗಾಂಧಿ ಪರಿವಾರದ ಈ ಟ್ರಸ್ಟ್‌ಗಳಿಗೆ ಹಣ ಸಂದಾಯವಾಗಿತ್ತು ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ಕಳೆದ ವಾರವಷ್ಟೇ ಗಂಭೀರ ಆರೋಪ ಮಾಡಿದ್ದ ಬೆನ್ನಲ್ಲಿಯೇ ಈ ಬೆಳವಣಿಗೆ ನಡೆದಿದೆ.

ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ದತ್ತಿ ಸಂಸ್ಥೆ ಹಾಗೂ ಇಂದಿರಾ ಗಾಂಧಿ ದತ್ತಿ ಸಂಸ್ಥೆಗಳ ಮೇಲೆ ಹಣಕಾಸು ವಹಿವಾಟಿನಲ್ಲಿ ಗೋಲುಮಾಲಿನ ಆರೋಪಗಳನ್ನು ಮಾಡಲಾಗಿದೆ.