95 ಬೃಹತ್ ಕೈಗಾರಿಕೆಗಳ ಅನುಷ್ಠಾನ ರೂ.25253.40 ಕೋಟಿ ಬಂಡವಾಳ ಹೂಡಿಕೆ: ಸಚಿವ ಮುರುಗೇಶ್ ನಿರಾಣಿ

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 95ಬೃಹತ್ ಕೈಗಾರಿಕೆಗಳು ಅನುಷ್ಠಾನಗೊಂಡಿದ್ದು, ಇವುಗಳಿಂದ ರೂ.25253.40 ಕೋಟಿ ಬಂಡವಾಳ ಹೂಡಿಕೆಯಾಗಿದೆ ಹಾಗೂ 1,16,151 ಜನರಿಗೆ ಉದ್ಯೋಗವಕಾಶ ದೊರೆತಿದೆ..

Online News Today Team

ಬೆಳಗಾವಿ ಸುವರ್ಣಸೌಧ, ಡಿ.21 : ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 95ಬೃಹತ್ ಕೈಗಾರಿಕೆಗಳು ಅನುಷ್ಠಾನಗೊಂಡಿದ್ದು, ಇವುಗಳಿಂದ ರೂ.25253.40 ಕೋಟಿ ಬಂಡವಾಳ ಹೂಡಿಕೆಯಾಗಿದೆ ಹಾಗೂ 1,16,151 ಜನರಿಗೆ ಉದ್ಯೋಗವಕಾಶ ದೊರೆತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯ ಯು.ಬಿ.ವೆಂಕಟೇಶ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಇಲ್ಲಿಯವರೆಗೆ ರಾಜ್ಯ ಉನ್ನತಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ 876 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು,ಇವುಗಳಿಂದ 114250.9 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 288970 ಜನರಿಗೆ ಉದ್ಯೋಗ ಸೃಜನೆಯಾಗಲಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು 2018-19 ನೇ ಸಾಲಿನಲ್ಲಿ 69278 ಘಟಕಗಳು ಸ್ಥಾಪನೆಯಾಗಿದ್ದು, 14877 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿವೆ;ಇದರಿಂದ 582943 ಜನರಿಗೆ ಉದ್ಯೋಗ ದೊರೆತಿದೆ. 2019-20ನೇ ಸಾಲಿನಲ್ಲಿ 97232 ಘಟಕಗಳು ಸ್ಥಾಪನೆಯಾಗಿದ್ದು 18598 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು 702325 ಜನರಿಗೆ ಉದ್ಯೋಗ ದೊರೆತಿದೆ. 2020-21ನೇ ಸಾಲಿನಲ್ಲಿ 82227 ಘಟಕಗಳು ಸ್ಥಾಪನೆಯಾಗಿದ್ದು,18085 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಲಾಗಿದೆ ಮತ್ತು 542890 ಜನರಿಗೆ ಉದ್ಯೋಗ ದೊರೆತಿರುವ ಮಾಹಿತಿಯನ್ನು ಸದನಕ್ಕೆ ತಿಳಿಸಿದರು.

ಮೇಕ್ ಇನ್ ಇಂಡಿಯಾ ಎಂಬ ಯೋಜನೆಯು ಆತ್ಮನಿರ್ಭರ್ ಮತ್ತು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ.ಹೂಡಿಕೆಯನ್ನು ಸುಗಮಗೊಳಿಸಲು,ನಾವಿನ್ಯತೆಯನ್ನು ಪೋಷಿಸಲು,ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು ಮತ್ತು ಅತ್ಯುತ್ತಮ ದರ್ಜೆಯ ಉತ್ಪಾದನಾ ಮೂಲಸೌಕರ್ಯ ನಿರ್ಮಿಸುವ ಯೋಜನೆಯಾಗಿದೆ ಎಂದು ವಿವರಿಸಿದ ಸಚಿವ ನಿರಾಣಿ ಅವರು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಜಿಡಿಪಿಯಲ್ಲಿ ಉತ್ಪಾದನಾ ಪಾಲು 2014ನೇ ಸಾಲಿನಲ್ಲಿದ್ದ ಶೇ.16ರಿಂದ ಶೇ.25ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿತ್ತು ಹಾಗೂ ಹೆಚ್ಚುವರಿ ಉದ್ಯೋಗವಕಾಶಗಳನ್ನು ಸೃಜಿಸುವುದಾಗಿತ್ತು. ಕೋವಿಡ್ ಕಾರಣದಿಂದ ಆಗಿರುವುದಿಲ್ಲ. 2020-21ನೇ ಸಾಲಿನಲ್ಲಿ  ಶೇ.17ರಷ್ಟು ಉತ್ಪಾದನಾ ಪಾಲು ಇರುತ್ತದೆ ಎಂದು ಅವರು ವಿವರಿಸಿದರು.

ಉದ್ಯಮಿಯಾಗಿ ಉದ್ಯೋಗ ನೀಡು ಎಂಬ ವಿನೂತನ ಕಾರ್ಯಕ್ರಮವನ್ನು ನಮ್ಮ ಸರಕಾರ ಜಾರಿಗೆ ತಂದಿದ್ದು, ಈ ಯೋಜನೆ ಅಡಿ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆ ಅಡಿ ಲಭ್ಯವಿರುವ ಸೌಲಭ್ಯಗಳು ಮತ್ತು ಸಹಾಯಧನದ ಕುರಿತು ತಿಳಿವಳಿಕೆ ನೀಡುವುದರ ಮೂಲಕ ಉದ್ಯಮಗಳನ್ನು ಸ್ಥಾಪಿಸಲು ಪ್ರೇರೆಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

Follow Us on : Google News | Facebook | Twitter | YouTube