“ದೋಸ್ತಿ” ಸರ್ಕಾರಕ್ಕೆ ಮತ್ತೊಂದು ಕಂಟಕ

“ದೋಸ್ತಿ” ಸರ್ಕಾರಕ್ಕೆ ಮತ್ತೊಂದು ಕಂಟಕ

ಬೆಂಗಳೂರು : 2018ರ ವಿಧಾನಸಭಾ ಚುನಾವಣಾ ಸಮರದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ಮಾಡಲು ಪ್ರಾರಂಭ ಮಾಡಿದ ದಿನದಿಂದಲೂ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತ ಬಂದಿದೆ ಈಗ ಎದುರಾಗಿರುವ ಕಂಟಕ ಮೈತ್ರಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ದ್ವೇಷ ರಾಜಕಾರಣ ಮಾಡುತ್ತಿರುವ ಗೃಹ ಸಚಿವ ಎಂಬಿ ಪಾಟೀಲ್ ಹಾಗೂ ಪ್ರತಿಪಕ್ಷಗಳ ಹತ್ತಿಕ್ಕು ಮೈತ್ರಿ ಸರ್ಕಾರ ಧೋರಣೆ ವಿರುದ್ಧ ಮೇ 6ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಶನಿವಾರ ತಿಳಿಸಿದೆ.

ಜನರಿಂದ ಜನರಿಗಾಗಿ ಜನರಿಗೋಸ್ಕರ ವಾಗಿ ನಡೆಸುವ ಸರ್ಕಾರ ದೋಸ್ತಿ ಸರ್ಕಾರ ಎಂಬ ಮಾತು ಇಂದು ಹುಸಿಯಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಈ ಕುರಿತು ಹೇಳಿಕೆ ಒಂದನ್ನು ಬಿಡುಗಡೆ ಮಾಡಿದ್ದಾರೆ. ಮೈತ್ರಿ ಪಕ್ಷಗಳ ನಡುವಿನ ಆಂತರಿಕ ಕಲಹದಿಂದಾಗಿ ನೂರೆಂಟು ವಿಘ್ನಗಳು ಸರ್ಕಾರಕ್ಕೆ ಎದುರಾಗುತ್ತಿದೆ. ರಾಜ್ಯ ಸರ್ಕಾರದಲ್ಲಿ ಮಂತ್ರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಸ್ವಾರ್ಥ ಸಾಧನೆಗೋಸ್ಕರ ವಿರೋಧ ಪಕ್ಷಗಳ ರಾಜಕಾರಣದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೂಡಿ ಬಾಳಿದರೆ ಅದೆ ಸ್ವರ್ಗ ಎಂಬ ಮಾತು ಮೈತ್ರಿ ಸರ್ಕಾರದಲ್ಲಿ ಸುಳ್ಳಾಗಿದೆ ಮೈತ್ರಿ ಸರ್ಕಾರದಲ್ಲಿ ದ್ವೇಷದ ರಾಜಕಾರಣ ಮಿತಿಮೀರಿದ್ದು ರಾಜಕೀಯ ವಿರೋಧಿಗಳು ಮತ್ತು ಮಾಧ್ಯಮದ ವಿರುದ್ಧ ಸರ್ಕಾರ ಪ್ರತೀಕಾರದ ಕ್ರಮಕ್ಕೆ ಮುಂದಾಗಿರುವುದು ಸ್ಪಷ್ಟವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನ ಹತ್ಯೆ ಮಾಡುವಂತೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದರು. ಅದೇ ರೀತಿ ಜೆಡಿಎಸ್ ಶಾಸಕರಾದ ನಾರಾಯಣಗೌಡ ಅವರು ನಟರಾದ ದರ್ಶನ್, ಯಶ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೂ ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಆಪಾದಿಸಿದ್ದಾರೆ.

ಆದರೆ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಹಿತೈಷಿಗಳ ವಿರುದ್ಧ ದೂರು ದಾಖಲಿಸಿ ಬೆದರಿಸಲು ಪೊಲೀಸರನ್ನು ದುರ್ಬಳಕೆ ಮಾಡಲಾಗುತ್ತಿದೆ. ಐಪಿಸಿ 307ರ ಅಡಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗಿದ್ದರೂ ಕೇವಲ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ಪ್ರಧಾನಿಗಳ ಹತ್ಯೆ ಮಾಡುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದವರನ್ನು ಬಂಧಿಸದ ಸರ್ಕಾರ, ಕೇವಲ ಸರ್ಕಾರದ ವಿರುದ್ಧದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣಕ್ಕೆ ಬಿಜೆಪಿ ಬಗ್ಗೆ ಅಭಿಮಾನ ಹೊಂದಿರುವ ಪತ್ರಕರ್ತರಿಗೂ ಕಿರುಕುಳ ನೀಡಿ ಬಂಧಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕವಡೆ ಕಾಸಿನ ಬೆಲೆಯೂ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸ್ವತಃ ಧರ್ಮ ವಿಭಜನೆಗೆ ಯತ್ನಿಸಿದ ಸಚಿವ ಎಂ.ಬಿ. ಪಾಟೀಲ್ ದ್ವೇಷ ರಾಜಕಾರಣದ ಮುಂಚೂಣಿಯಲ್ಲಿ ನಿಂತಿರುವುದು ಖಂಡನೀಯ. ವಿರೋಧ ಪಕ್ಷಗಳನ್ನು ಹತ್ತಿಕ್ಕಿ, ಮಾಧ್ಯಮಗಳನ್ನು ಬೆದರಿಸಿ ಬಾಯಿ ಮುಚ್ಚಿಸಲು ಹೊರಟಿರುವ ಮೈತ್ರಿ ಸರ್ಕಾರದ ವಿರುದ್ಧ, ರಾಜ್ಯದ ಗೃಹ ಸಚಿವರ ದ್ವೇಷದ ರಾಜಕಾರಣ ಖಂಡಿಸಿ ಮೇ ೬ರ ಸೋಮವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.////

Kannada News Today Updates you with Latest news.

Follow us On

FaceBook Google News