ರಾಜ್ಯದಲ್ಲಿ 88ರಲ್ಲಿ 65 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತ, 8.93 ಕೋಟಿ ರೂ. ಬಾಕಿ ವಸೂಲಾತಿಗೆ ಅಗತ್ಯ ಕ್ರಮ : ಸಚಿವ ಮುನೇನಕೊಪ್ಪ

2018-19ನೇ ಹಂಗಾಮಿನಲ್ಲಿ 4 ಸಕ್ಕರೆ ಕಾರ್ಖಾನೆಗಳು 8.93ಕೋಟಿ ರೂ.ಗಳ ಕಬ್ಬಿನ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ.

Online News Today Team

ಬೆಳಗಾವಿ ಸುವರ್ಣಸೌಧ, ಡಿ.21 : 2018-19ನೇ ಹಂಗಾಮಿನಲ್ಲಿ 4 ಸಕ್ಕರೆ ಕಾರ್ಖಾನೆಗಳು 8.93ಕೋಟಿ ರೂ.ಗಳ ಕಬ್ಬಿನ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ. ಈ ಕಾರ್ಖಾನೆಗಳು ಪ್ರಸ್ತುತ ನಿಷ್ಕ್ರಿಯವಾಗಿದ್ದು, ಬಾಕಿ ವಸೂಲಾತಿಗೆ ಎಲ್ಲ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. 2020-21ನೇ ಹಂಗಾಮಿನಲ್ಲಿ ಯಾವುದೇ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವುದಿಲ್ಲ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಮುನೇನಕೊಪ್ಪ ಅವರು ಸಕ್ಕರೆ ಕಾರ್ಖಾನೆಗಳು 2016-17ನೇ ಹಂಗಾಮಿನಲ್ಲಿ 5,343.07 ಕೋಟಿ ಪಾವತಿಸಬೇಕಾಗಿತ್ತು;6,702.84 ಕೋಟಿ ರೂ.ಪಾವತಿಸಲಾಗಿದೆ. 2017-18ನೇ ಹಂಗಾಮಿನಲ್ಲಿ 9,851.83 ಕೋಟಿ ರೂ.ಪಾವತಿಸಬೇಕಾಗಿತ್ತು;10,605.12 ಕೋಟಿ ರೂ. ಪಾವತಿಸಲಾಗಿದೆ. 2018-19ನೇ ಸಾಲಿನಲ್ಲಿ 8.93 ಕೋಟಿ ರೂ. ಬಾಕಿ ಹೊರತುಪಡಿಸಿ 12,083.79ಕೋಟಿ ಪಾವತಿಸಲಾಗಿದೆ. 2019-20ನೇ ಸಾಲಿನಲ್ಲಿ 5.80 ಕೋಟಿ ರೂ.ಬಾಕಿ ಹೊರತುಪಡಿಸಿ 10,671.94 ಕೋಟಿ ರೂ. ಪಾವತಿಸಲಾಗಿದೆ. 2020-21ನೇ ಸಾಲಿನಲ್ಲಿ 13,324.49 ಕೋಟಿ ರೂ. ಪಾವತಿಸಬೇಕಾಗಿತ್ತು;13,533.08 ಕೋಟಿ ಪಾವತಿಸಲಾಗಿದ್ದು,ಯಾವುದೇ ರೀತಿಯ ಬಾಕಿ ಇರುವುದಿಲ್ಲ ಎಂದು ಅವರು ಸದನಕ್ಕೆ ತಿಳಿಸಿದರು.

ಕೆಲವು ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರಕಾರ ನಿಗದಿಪಡಿಸಿದ ಎಫ್‍ಆರ್‍ಪಿ ದರಕ್ಕಿಂತ ಹೆಚ್ಚಿಗೆ ಕಬ್ಬಿನ ಬಿಲ್ಲನ್ನು ರೈತರಿಗೆ ಪಾವತಿಸಿವೆ ಎಂದು ಅವರು ತಿಳಿಸಿದರು.

2019-20ನೇ ಸಾಲಿನಲ್ಲಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯು 5.80 ಪಾವತಿಸಿರುವುದು ಬಾಕಿ ಉಳಿಸಿಕೊಂಡಿರುತ್ತದೆ;ಈ ಕುರಿತು ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.

65 ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭ: 2021-22ನೇ ಹಂಗಾಮಿನಲ್ಲಿ ನವೆಂಬರ್ ತಿಂಗಳಿಂದ 65 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಿವೆ. ಈ ಕಾರ್ಖಾನೆಗಳು ನ.15ರವರೆಗೆ 112.39ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 9.60ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿ ಶೇ.8.54ರಷ್ಟು ಇಳುವರಿ ಪಡೆದಿವೆ. ಈವರೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಾರ್ಖಾನೆಗಳು 3457.53ಕೋಟಿ ರೂ.ಗಳಾಗಿದ್ದು, ಈ ಪೈಕಿ 1546.96 ಕೋಟಿ ರೂ.ಪಾವತಿಸಿವೆ. 1928.57 ಕೋಟಿ ಇನ್ನೂ ಪಾವತಿಸಬೇಕಿದೆ ಎಂದು ಸಚಿವ ಮುನೇನಕೊಪ್ಪ ಅವರು ವಿವರಿಸಿದರು.

ಕಾರ್ಖಾನೆಗಳು ರೈತರ ಕಬ್ಬು ಬಿಲ್ಲನ್ನು ನಿಯಮಾನುಸಾರ ಪ್ರತಿ 14 ದಿನಗಳಿಗೊಮ್ಮೆ ಪಾವತಿಸಲು ಕ್ರಮಕೈಗೊಳ್ಳುತ್ತಿವೆ.ಪಾವತಿ ಮಾಡದಿದ್ದಲ್ಲಿ ಕಬ್ಬು(ನಿಯಂತ್ರಣ) ಆದೇಶ 1966 ಪ್ರಕಾರ ಶಾಸನಬದ್ಧ ನೋಟಿಸ್ ಜಾರಿಗೊಳಿಸಿ ಪಾವತಿಗೆ ಕ್ರಮಜರುಗಿಸಲಾಗುವುದು ಎಂದರು.

08 ಸಕ್ಕರೆ ಕಾರ್ಖಾನೆಗಳು ಖಾಸಗಿಯವರಿಗೆ ಗುತ್ತಿಗೆ: ದುಡಿಯುವ ಬಂಡವಾಳದ ಕೊರತೆ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ ಒಟ್ಟು 08 ಸಕ್ಕರೆ ಕಾರ್ಖಾನೆಗಳನ್ನು ಇದುವರೆಗೆ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಸಚಿವ ಮುನೇನಕೊಪ್ಪ ಅವರು ವಿವರಿಸಿದರು.

ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆ, ಮುಧೋಳ ತಾಲೂಕಿನ ರನ್ನನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದ ಸಚಿವ ಶಂಕರ ಮುನೇನಕೊಪ್ಪ ಅವರು ಅನುತ್ಪಾದಿತ ಸಕ್ಕರೆ ಕಾರ್ಖಾನೆಗಳನ್ನು ಬಲಪಡಿಸುವ ಸಲುವಾಗಿ ಕೇಂದ್ರದಿಂದ ಕಳೆದ ಐದು ವರ್ಷಗಳಲ್ಲಿ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 88 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು,ಇವುಗಳ ಪೈಕಿ 65 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿವೆ. 18 ಸ್ಥಗಿತಗೊಂಡಿದ್ದು, 05 ಸಮಾಪನೆಗೊಂಡಿವೆ ಎಂದರು.

ಕಾರ್ಯನಿರತರಾಗಿರುವ 65 ಸಕ್ಕರೆ ಕಾರ್ಖಾನೆಗಳಲ್ಲಿ 53 ಸಕ್ಕರೆ ಕಾರ್ಖಾನೆಗಳಲ್ಲಿ ಸಹ ವಿದ್ಯುತ್ ಘಟಕಗಳನ್ನು ಹೊಂದಿದ್ದು,ಇವುಗಳ ಒಟ್ಟು ವಿದ್ಯುತ್ ಉತ್ಪಾದನಾ ಸಾಮಥ್ರ್ಯ 1516.22 ಮೆಘಾವ್ಯಾಟ್‍ಗಳಾಗಿವೆ ಎಂದು ಅವರು ವಿವರಿಸಿದ ಸಚಿವ ಮುನೇನಕೊಪ್ಪ ಅವರು 2016-17ನೇ ಸಾಲಿನಿಂದ 2020-21ರವರೆಗೆ 174828854 ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದ್ದು, 14035201 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ ಎಂದು ಅವರು ತಿಳಿಸಿದರು.

Follow Us on : Google News | Facebook | Twitter | YouTube