ಶಿವಮೊಗ್ಗ : ತತ್ಕಾಲ್ ವಿಶೇಷ ರೈಲಿಗೆ ಹಸಿರು ನಿಶಾನೆ

Shimoga : Green Signal For Tatkal special train

ಕನ್ನಡ ನ್ಯೂಸ್ ಟುಡೇShimoga News

ಶಿವಮೊಗ್ಗ : ಮುಂದಿನ ದಿನಗಳಲ್ಲಿ ಶಿವಮೊಗ್ಗ ನಗರಕ್ಕೆ ಇನ್ನಷ್ಟು ರೈಲು ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಅವರು ಗುರುವಾರ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಶಿವಮೊಗ್ಗ ಟೌನ್-ಯಶವಂತಪುರ ವಾರದಲ್ಲಿ 4ದಿನಗಳ ತತ್ಕಾಲ್ ವಿಶೇಷ ಎಕ್ಸ್‍ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಶಿವಮೊಗ್ಗ : ತತ್ಕಾಲ್ ವಿಶೇಷ ರೈಲಿಗೆ ಹಸಿರು ನಿಶಾನೆ - Kannada News

ಪ್ರಸ್ತುತ ಶಿವಮೊಗ್ಗ ನಗರಕ್ಕೆ ಒಟ್ಟು 16ರೈಲುಗಳು ಆಗಮಿಸುತ್ತಿದ್ದು, ಕೋಟೆ ಗಂಗೂರಿನಲ್ಲಿ ರಾಜ್ಯದ ನಾಲ್ಕನೇ ರೈಲ್ವೇ ಕೋಚಿಂಗ್ ಟರ್ಮಿನಲ್ ಪ್ರಾರಂಭವಾದ ಬಳಿಕ ಇನ್ನಷ್ಟು ರೈಲು ಸಂಪರ್ಕ ಸಾಧ್ಯವಾಗಲಿದೆ. ಶಿವಮೊಗ್ಗ ರೈಲು ನಿಲ್ದಾಣ ಟರ್ಮಿನಲ್ ಆಗಿ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ಕು ರೈಲ್ವೇ ಮೇಲ್ಸೇತುವೆಗಳ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದ್ದು, ಸಧ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ 35ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಇದೇ ರೀತಿ ಸವಳಂಗ ರಸ್ತೆ ಹಾಗೂ ಕಾಶೀಪುರದಲ್ಲಿ ರೈಲ್ವೇ ಮೇಲ್ಸೇತುವೆ ಮಂಜೂರಾತಿ ದೊರೆತಿದೆ. ಭದ್ರಾವತಿಯ ಕಡದಕಟ್ಟೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ನಗರದಲ್ಲಿ ಹಲವು ವರ್ಷಗಳಿಂದ ಬಾಕಿಯಿದ್ದ ವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ವರ್ತುಲ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಸ್ವಾಧೀನ ಇತ್ಯಾದಿ ಕಾರ್ಯಗಳಿಗೆ 20ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ 15ದಿನಗಳಲ್ಲಿ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.

420ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಕೊಲ್ಲೂರು ಕೊಡಚಾದ್ರಿ ನಡುವೆ 11ಕಿಮಿ ಉದ್ದದ ಕೇಬಲ್ ಕಾರ್ ಯೋಜನೆ ಅನುಷ್ಟಾನಗೊಳಿಸಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.

ಸ್ಮಾರಕ ಧ್ವಜ ಅನಾವರಣ: ಶಿವಮೊಗ್ಗ ರೈಲು ನಿಲ್ದಾಣದ ಹೊರಭಾಗದಲ್ಲಿ ಪ್ರತಿಷ್ಟಾಪಿಸಲಾಗಿರುವ 100ಅಡಿ ಎತ್ತರದ ಕಂಬದ ಮೇಲೆ ಬೃಹತ್ ತ್ರಿವರ್ಣ ಸ್ಮಾರಕ ಧ್ವಜವನ್ನು ಅವರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು.

ಶಾಸಕ ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ರುದ್ರೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ವಿಜಯ ಕುಮಾರ್, ಮೇಯರ್ ಲತಾ ಗಣೇಶ್, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಶಾಂತರಾಜು ಮತ್ತಿತರರು ಉಪಸ್ಥಿತರಿದ್ದರು.////

Quick Links : Shimoga News Kannada


 

Follow us On

FaceBook Google News