ಬಹುಗ್ರಾಮ ಕುಡಿಯುವ ನೀರು ಯೋಜನೆ ಫೆಬ್ರವರಿ ಅಂತ್ಯದೊಳಗಾಗಿ ಆರಂಭವಾಗಬೇಕು: ಸಚಿವ ಕೆ.ಎಸ್.ಈಶ್ವರಪ್ಪ

The multi-village drinking water project should start by the end of February : KS Eshwarappa

ಕನ್ನಡ ನ್ಯೂಸ್ ಟುಡೇ

ಶಿವಮೊಗ್ಗ : ಜಿಲ್ಲೆಯ ಏಳು ತಾಲೂಕುಳಲ್ಲಿ ಕೈಗೊಳ್ಳಲಾಗಿರುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಫೆಬ್ರವರಿ ಅಂತ್ಯದ ಒಳಗಾಗಿ ಎಲ್ಲಾ ಗ್ರಾಮಗಳಿಗೆ ನೀರು ಪೂರೈಕೆ ಪ್ರಾರಂಭವಾಗಬೇಕು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆ ಫೆಬ್ರವರಿ ಅಂತ್ಯದೊಳಗಾಗಿ ಆರಂಭವಾಗಬೇಕು: ಸಚಿವ ಕೆ.ಎಸ್.ಈಶ್ವರಪ್ಪ - Kannada News

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 1615 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕಾಮಗಾರಿ ನಡೆಸಲಾಗುತ್ತಿದೆ. ಇದೇ ರೀತಿ ಇನ್ನುಳಿದ 3258 ಜನವಸತಿ ಪ್ರದೇಶಗಳಿಗೆ ಜಲಧಾರೆ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಯೋಜನಾ ವರದಿಯನ್ನು ಆದಷ್ಟು ಬೇಗನೆ ಸಿದ್ಧಪಡಿಸಿ ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದರು.

ಇದೇ ರೀತಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ 89 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 12 ದುರಸ್ತಿಯಲ್ಲಿದ್ದು, ಅವುಗಳನ್ನು ಆದಷ್ಟು ಬೇಗನೆ ದುರಸ್ತಿಗೊಳಿಸಬೇಕು. ಇದೇ ರೀತಿ ನೀರಿನ ಘಟಕಗಳ ಸ್ಥಿತಿಗತಿ ಕುರಿತಾಗಿ ಆಯಾ ಗ್ರಾಮ ಪಂಚಾಯತ್‍ಗಳಲ್ಲಿ ಮಾಹಿತಿ ಫಲಕವನ್ನು ಅಳವಡಿಸುವಂತೆ ಅವರು ತಿಳಿಸಿದರು.

ತನಿಖೆಗೆ ಸಮಿತಿ ರಚನೆ : ತುಂಗಾ ಮೇಲ್ದಂಡೆ ನಾಲೆ ಆಧುನೀಕರಣ ಕಾಮಗಾರಿ ಕಳಪೆ ಗುಣಮಟ್ಟದ ಕುರಿತು ಬಂದಿರುವ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು. ಸಮಿತಿಯು 15ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಬೇಕು ಎಂದು ಸಚಿವರು ತಿಳಿಸಿದರು.

ಪ್ರಥಮ ಹಂತದ ಕಾಮಗಾರಿ ಕಳಪೆ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಇದೀಗ 140ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಯನ್ನು ಸಹ ಅದೇ ಗುತ್ತಿಗೆದಾರನಿಗೆ ವಹಿಸಲಾಗಿದೆ. ಈಗಾಗಲೇ 80ಕೋಟಿ ರೂ. ಪಾವತಿ ಸಹ ಮಾಡಲಾಗಿದೆ. ತನಿಖೆ ಮುಗಿಯುವ ತನಕ ಕಾಮಗಾರಿಯನ್ನು ತಕ್ಷಣ ನಿಲ್ಲಿಸಲು ಹಾಗೂ ಪಾವತಿಯನ್ನು ತಡೆ ಹಿಡಿಯುವಂತೆ ಸಚಿವರು ಸೂಚನೆ ನೀಡಿದರು.

ಅಕ್ರಮ ಮರಳು ಕಟ್ಟುನಿಟ್ಟಿನ ಕ್ರಮ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ವ್ಯಾಪಕ ದೂರುಗಳು ಬರುತ್ತಿದ್ದು, ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪರವಾನಿಗೆ ನೀಡಲಾಗಿರುವ ಮರಳು ಕ್ವಾರಿಗಳಲ್ಲಿ ಮರಳುಗಾರಿಕೆ ನಡೆಸಲು ತಕ್ಷಣ ಅನುಮತಿ ನೀಡಬೇಕು. ಚೆಕ್‍ಪೋಸ್ಟ್ ಸ್ಥಾಪನೆ, ಸಿಸಿಟಿವಿ ಅಳವಡಿಕೆ, ವಿಚಕ್ಷಣಾ ದಳ ಸ್ಥಾಪನೆ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಈ ಕುರಿತು ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿ, ಈಗಾಗಲೇ 35ಮರಳು ಕ್ವಾರಿಗಳಿಗೆ ಪರವಾನಿಗೆ ನೀಡಲಾಗಿದೆ. ಅಕ್ರಮ ಮರಳುಗಾರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮಳನ್ನು ಕೈಗೊಳ್ಳಲಾಗಿದೆ. ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ಎಂದರು.
ಶಾಲಾ ಕಟ್ಟಡ ದುರಸ್ತಿ: ಜಿಲ್ಲೆಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ 791 ಪ್ರಾಥಮಿಕ ಹಾಗೂ 37ಪ್ರೌಢ ಶಾಲೆಗಳ 1707ಕೊಠಡಿಗಳ ದುರಸ್ತಿಗೆ 34ಕೋಟಿ ರೂ. ನಿಗದಿಯಾಗಿದ್ದು, ಈಗಾಗಲೇ 26ಕೋಟಿ ರೂ. ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ. ಉಳಿದ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಅನುಷ್ಟಾನದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಸೂಚಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷ ವೇದಾ ವಿಜಯಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಕುಮಾರ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು./////


 

Follow us On

FaceBook Google News