ಸವದಿಯೋ?, ಜೊಲ್ಲೆಯೋ; ಯಾರಿಗೆ ಸಿಗಲಿದೆ ಉಸ್ತುವಾರಿ ಪಟ್ಟ?

savadi, jolle who will be the in-charge-minister

🌐 Kannada News :

ಕನ್ನಡ ನ್ಯೂಸ್ ಟುಡೇ, ರಾಜಕೀಯ : 

ಯಾರಾಗಲಿದ್ದಾರೆ ಮಂತ್ರಿ ಎನ್ನುವ ಪ್ರಶ್ನೆಗೆ ಒಂದು ಹಂತದಲ್ಲಿ ಉತ್ತರ ಸಿಕ್ಕಿದೆ. ಅಚ್ಛರಿಯ ಆಯ್ಕೆ ನಂತರ ಎದ್ದಿದ್ದ ಅಸಮಾಧಾನಗಳೂ ತನ್ನಿಂದ ತಾನೆ ತಣ್ಣಗಾಗಿವೆ. ಎಲ್ಲರೂ ಹುಬ್ಬೇರಿಸುವಂತೆ ಮಂತ್ರಿಯಾದ ಮಾಡಿದ ಮಾಜಿ ಶಾಸಕ ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ ಪಟ್ಟಕ್ಕೂ ಏರಿ ಮತ್ತೊಂದು ಶಾಕ್ ನೀಡಿದರು.

ಇವೆಲ್ಲ ಮುಗಿದ ಅಧ್ಯಾಯ. ಈಗ ಇರುವ ಪ್ರಶ್ನೆ ಯಾರಾಗಲಿದ್ದಾರೆ ಉಸ್ತುವಾರಿ ಮಂತ್ರಿ? ಲಕ್ಷ್ಮಣ ಸವದಿಯೋ?  ಶಶಿಕಲಾ ಜೊಲ್ಲೆಯೋ? ಅಥವಾ ಇವರಿಬ್ಬರನ್ನೂ ಬಿಟ್ಟು ಇನ್ಯಾರಾದರೂ ಬರಲಿದ್ದಾರೊ? ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವಸ್ಥಾನ ಬಹುಶಃ ಜಿಲ್ಲೆಗಷ್ಟೆ ಅಲ್ಲ, ಇಡೀ ರಾಜ್ಯಕ್ಕೇ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ ಒಂದಲ್ಲ.

ಲಕ್ಷ್ಮಣ ಸವದಿ ಈ ಹಿಂದೆಯೂ ಸಚಿವರಾಗಿ ಕೆಲಸ ಮಾಡಿದವರು. ಈಗ ಸಾರಿಗೆ ಇಲಾಖೆಯ ಜೊತೆಗೆ ಉಪಮುಖ್ಯಮಂತ್ರಿ ಬೇರೆ. ಶಶಿಕಲಾ ಜೊಲ್ಲೆಗೆ ಹೋಲಿಸಿದರೆ ರಾಜಕೀಯದಲ್ಲಿ ಸೀನಿಯರ್. ಹಾಗಾಗಿ ಅವರಿಗೆ ಉಸ್ತುವಾರಿ ಸಚಿವಸ್ಥಾನ ಸಹಜ ಎನ್ನುವ ಭಾವನೆ ಸಾಮಾನ್ಯವಾಗಿದೆ.

ಆದರೆ, ಅವರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಲಾಗಿರುವುದರಿಂದ ಶಶಿಕಲಾ ಜೊಲ್ಲೆಗೆ ಉಸ್ತುವಾರಿ ಮಂತ್ರಿಸ್ಥಾನ ಕೊಡಿ ಎನ್ನುವ ಬೇಡಿಕೆಯೂ ಇದೆ. ಎರಡನೇ ಬಾರಿಗೆ ಶಾಸಕರಾಗಿರುವ ಶಶಿಕಲಾ ಜೊಲ್ಲೆ ಕೂಡ ಸಹಕಾರಿ, ಸಾಮಾಜಿಕ, ಬ್ಯಾಂಕಿಂಗ್, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಜ್ಞಾನ ಹೊಂದಿದ್ದಾರೆ.

ಹೊಸ ಸೇರ್ಪಡೆ ಕುತೂಹಲ

ಹಾಗಾಗಿ ಇಬ್ಬರಲ್ಲಿ ಯಾರಿಗೆ ಉಸ್ತುವಾರಿ ಪಟ್ಟ ಸಿಗಲಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಆದರೆ ವಿಷಯ ಇಷ್ಟಕ್ಕೇ ಮುಗಿದಿಲ್ಲ. ರಾಜ್ಯ ಸಚಿವಸಂಪುಟ ಅರ್ಧ ಮಾತ್ರ ವಿಸ್ತರಣೆಯಾಗಿದೆ. ಇನ್ನೂ ಸುಮಾರು 17 ಜನರು ಸೇರಲಿದ್ದಾರೆ. ಎರಡನೇ ಹಂತದಲ್ಲಿ ಬೆಳಗಾವಿಯಿಂದ ಇಬ್ಬರು ಸೇರ್ಪಡೆಯಾಗಬುಹುದು ಎನ್ನುವ ಸುದ್ದಿ ಇದೆ.

ಬೆಳಗಾವಿಯಿಂದ ಉಮೇಶ ಕತ್ತಿ ಅಥವಾ ಅಭಯ ಪಾಟೀಲ ಮತ್ತು ರಮೇಶ ಜಾರಕಿಹೊಳಿ ಎರಡನೆ ಹಂತದಲ್ಲಿ ಸಂಪುಟ ಸೇರಲಿದ್ದಾರೆ ಎನ್ನುವ ಸುದ್ದಿ ಇದೆ. ಹಾಗಾದಲ್ಲಿ, ಹಿರಿಯರಾದ ಉಮೇಶ ಕತ್ತಿ, ರಮೇಶ ಜಾರಕಿಹೊಳಿ ಇವರಲ್ಲಿ ಒಬ್ಬರಿಗೆ ಉಸ್ತುವಾರಿ ಸಚಿವಸ್ಥಾನ ನೀಡಬಹುದು.

ಈಗ ಯಾರಿಗಾದರೂ ನೀಡಿದರೆ ಅದನ್ನು ಹಿಂದೆ ಪಡೆದು ಮತ್ತೊಬ್ಬರಿಗೆ ನೀಡುವುದು ಕಷ್ಟವಾಗಬಹುದು. ಆದರೆ ಎರಡನೇ ಹಂತದ ವಿಸ್ತರಣೆಯವರೆಗೆ ಕಾಯುವುದೂ ಕಷ್ಟ. ಹಾಗಾಗಿ ಸಧ್ಯಕ್ಕೆ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಮೇಶ ಜಾರಕಿಹೊಳಿಗೆ ಪ್ರಮುಖ ಖಾತೆ, ಪ್ರಮುಖ ಸ್ಥಾನ ನೀಡದಿರಲು ಸಾಧ್ಯವೇ ಇಲ್ಲ. ಅದು ಮತ್ತೊಂದು ಸುತ್ತಿನ ಬಂಡಾಯಕ್ಕೆ ಎಡಮಾಡಿಕೊಡಬಹುದು. ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನವನ್ನು ಅವರಿಗೆ ನೀಡಿದರೂ ಅಚ್ಛರಿ ಇಲ್ಲ.

ಒಟ್ಟಾರೆ ಬೆಳಗಾವಿ ರಾಜಕೀಯದ ಕುತೂಹಲ ಇನ್ನೂ ಮುಗಿದಿಲ್ಲ. ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸುತ್ತ ಹೋದರೂ ಅಚ್ಛರಿ ಇಲ್ಲ.////


WebTitle : savadi, jolle who will be the in-charge-minister
(Kannada News : Get Live News Alerts Online Today @ kannadanews.today – Read Latest Karnataka Politics News /Politics News Kannada, Breaking News in Kannada )

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile