ಭಾರತದ ಮುಸ್ಲಿಮರೇ ನಿಮಗೆ ಯಾವುದೇ ತೊಂದರೆಯಿಲ್ಲ : ಅಮಿತ್ ಶಾ

you have no problem, Says Amit Shah To Indian Muslims - Hubballi News

🌐 Kannada News :

ಕನ್ನಡ ನ್ಯೂಸ್ ಟುಡೇPolitics News

ಹುಬ್ಬಳ್ಳಿ : ‘ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಮತ್ತು ಕಮ್ಯೂನಿಸ್ಟ್ ಪಕ್ಷದ ನಾಯಕರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ಇಲ್ಲಿನ ಮುಸ್ಲಿಮರ ನಾಗರಿಕತ್ವಕ್ಕೆ ಅಪಾಯ ಎನ್ನುತ್ತಿದ್ದಾರೆ. ಈ ಐತಿಹಾಸಿಕ ನೆಲದ ವೇದಿಕೆಯಿಂದ ಪ್ರಮಾಣ ಮಾಡುತ್ತೇನೆ, ದಕ್ಷಿಣ ಭಾರತದ ಮುಸ್ಲಿಮರೇ ನಿಮಗೆ ಯಾವುದೇ ತೊಂದರೆಯಿಲ್ಲ ಎಂದು ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಅವರು ನಗರದಲ್ಲಿ ಸಿಎಎ ಪರ ರಾಜ್ಯ ಬಿಜೆಪಿ ಹಮ್ಮಿಕೊಂಡ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಪಾಕಿಸ್ತಾನ್, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಸಿಖ್ಖರು ನೆಲೆ ಅರಸಿ ಇಲ್ಲಿಗೆ ಬಂದಿದ್ದಾರೆ. ೭೦ ವರ್ಷ ಕಳೆದರೂ ಅವರಿಗೆ ಪೌರತ್ವ ನೀಡಿದೇ ಕಾಂಗ್ರೆಸ್ ವಂಚಿಸಿದೆ ಎಂಬುದನ್ನು ರಾಹುಲ್ ಗಾಂಧಿ ತಿಳಿದುಕೊಳ್ಳಲಿ. ಜವಾಹರ್‌ಲಾಲ್ ನೆಹರು ಮತ್ತು ಮಹಮ್ಮದ್ ಅಲಿ ಜಿನ್ನಾ ಒಪ್ಪಂದ ಮಾಡಿಕೊಂಡು ಧರ್ಮದ ಆಧಾರದಲ್ಲಿ ಈ ದೇಶವನ್ನು ಒಡೆದರು. ದೇಶ ವಿಭಜನೆಯಿಂದ ದೌರ್ಜನಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ಮತ್ತು ಉಳಿದ ನೆರವು ನೀಡಬೇಕೆಂದು ಸ್ವತ: ನೆಹರು, ಮೌಲಾನಾ ಅಜಾದ್ ಹೇಳಿದ್ದರು. ಗಾಂಧೀಜಿ ಕೂಡ ಇದೇ ಮಾತನ್ನು ಹೇಳಿದ್ದರು. ೭೦ ವರ್ಷಗಳಲ್ಲಿ ಗಾಂಧಿಯವರ ಮಾತಿಗೂ ಕಾಂಗ್ರೆಸ್ ಗೌರವ ಕೊಡಲಿಲ್ಲ. ಈಗ ನರೇಂದ್ರ ಮೋದಿ ಆ ಅನ್ಯಾಯವನ್ನು ಸರಿಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ ನಡೆಸಿದರು.

‘ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಭಾಗವಲ್ಲವೇ? ಅದನ್ನು ಕಾಪಾಡಬೇಕಿರುವುದು ನಮ್ಮ ಕರ್ತವ್ಯ ಅಲ್ಲವೇ? ೩೭೦ನೇ ವಿಧಿ ರದ್ದು ಮಾಡಿದ್ದು ಸರಿಯೋ ತಪ್ಪೋ? ಹುಬ್ಬಳ್ಳಿ ಧಾರವಾಡದ ಜನತೆ ಅದು ಸರಿ ಎಂದು ಸಾರಿ. ಸಿಎಎ ಪರ ಮಿಸ್‌ಕಾಲ್ ಕೊಟ್ಟು ಮೋದಿಯವರಿಗೆ ಶಕ್ತಿ ತುಂಬಿ ಎಂದು ವಿನಂತಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಸುಪ್ರಿಂಕೋರ್ಟಿನ ಐವರು ನ್ಯಾಯಾಧೀಶರೇ ತೀರ್ಪು ನೀಡಿದ್ದಾರೆ. ಕಾಂಗ್ರೆಸ್ ಅದನ್ನು ವಿರೋಧಿಸುವ ಮೂಲಕ ಹಿಂದೂಗಳ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಈಗ ಸಿಎಎ ವಿರುದ್ಧ ಸುಳ್ಳು ಹಬ್ಬಿಸುವ ಮೂಲಕ ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಶಾ ಕಿಡಿ ಕಾರಿದರು.

ಭಾಷಣದುದ್ದಕ್ಕೂ ಅವರು ಕಾಂಗ್ರೆಸ್, ರಾಹುಲ್ ಗಾಂಧಿ, ಕಮ್ಯೂಮಿಸ್ಟ್ ಪಕ್ಷಗಳು, ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ವಿರುದ್ಧ ಪ್ರಹಾರ ನಡೆಸಿದರು. ಆರಂಭದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಪಂಡಿತ್ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ದ.ರಾ. ಬೇಂದ್ರೆ ಅವರಂತಹ ಚೇತನಗಳನ್ನು ನೀಡಿದ ಈ ಧಾರವಾಡ ನೆಲದಲ್ಲಿ ಐತಿಹಾಸಿಕ ಸಭೆ ನಡೆಯುತ್ತಿರುವುದು ನನಗೆ ಹರ್ಷ ತಂದಿದೆ ಎಂದು ಶಾ ಬಣ್ಣಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಶಿವಕುಮಾರ ಉದಾಸಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜಗದೀಶ ಶೆಟ್ಟರ್, ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಶಶಿಕಲಾ ಜೊಲ್ಲೆ, ಸಿ.ಸಿ. ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್, ಶಾಸಕರಾದ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ, ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಯುವ ನಾಯಕ ಅನಿಲ ಮೆಣಸಿನಕಾಯಿ, ಮುಖಂಡರಾದ ಶ್ರೀಪಾದ ಉಡುಪಿ, ಪ್ರಶಾಂತ ನಾಯ್ಕರ್, ಇರ್ಷಾದ್ ಮಾನ್ವಿ, ಮುತ್ತು ಕಡಗದ್, ಭದ್ರೇಶ ಕುಸಲಾಪೂರ, ಅಶ್ವಿನಿ ಜಗತಾಪ್, ಮತ್ತು ಧಾರವಾಡ ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.////

Quick Links : Kannada Politics News | Karnataka Politics News


 

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile