ವಿಶ್ವ ಐತಿಹಾಸಿ ನಗರಿ ವಿಜಯಪುರ ಸ್ಮಾರಕಗಳಿಗೆ ಇಲ್ಲ ರಕ್ಷಣೆ, ಯಾರಿಗೂ ಇಲ್ಲ ಅದರ ಹೊಣೆ

no protection for World historic city vijayapura - #Kannadanewstoday

ವಿಶ್ವ ಐತಿಹಾಸಿ ನಗರಿ ವಿಜಯಪುರ ಸ್ಮಾರಕಗಳಿಗೆ ಇಲ್ಲ ರಕ್ಷಣೆ, ಯಾರಿಗೂ ಇಲ್ಲ ಅದರ ಹೊಣೆ – no protection for World historic city vijayapura – Kannada News Today

ವಿಜಯಪುರ : ಆದಿಲ್‌ಶಾಹಿ ಸಾಮ್ರಾಜ್ಯದ ವೈಭವವನ್ನು ಕಣ್ತುಂಬಿಕೊಂಡು, ಅದ್ಭುತ ವಾಸ್ತುಶಿಲ್ಪವನ್ನು ಕಂಡು ಪ್ರವಾಸೋದ್ಯಮದ ಮಜಾ ಅನುಭವಿಸಬೇಕೆಂದರೆ ಐತಿಹಾಸಿಕ ನಗರಿ ವಿಜಯಪುರಕ್ಕೆ ಬರಬೇಕು. ಇಲ್ಲಿನ ನೂರಾರು ಸ್ಮಾರಕಗಳು ಒಡಲಲ್ಲಿ ಒಂದೊಂದು ಕಥೆಯನ್ನು ಹೊಂದಿವೆ.

ವಿಶ್ವ ಪರಂಪರೆ ಪಟ್ಟಿಗೆ ಸೇರುವ ಎಲ್ಲಾ ಅರ್ಹತೆಗಳಿರುವ ಸ್ಮಾರಕಗಳಿವೆ. ಆದರೆ ಸಂರಕ್ಷಣೆ ಇಲ್ಲದೆ ಸೊರಗುತ್ತಿವೆ. ಕೆಲ ಸ್ಮಾರಕಗಳಂತೂ ಅವಸಾನದ ಅಂಚಿನಲ್ಲಿವೆ. ಸ್ಮಾರಕಗಳ ಸಂರಕ್ಷಣೆ ಹಲವು ವರ್ಷಗಳ ಬೇಡಿಕೆಯಾಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ವಿಶ್ವವಿಖ್ಯಾತ ಗೋಲಗುಮ್ಮಟ, ಇಬ್ರಾಹಿಂ ರೋಜಾ, ಸಂಗೀತ ಮಹಲ್, ಗಗನ ಮಹಲ್, ತಾಜ್‌ಬಾವಡಿ, ಮೆಹತರ್ ಮಹಲ್, ಜೋಡ ಗುಮ್ಮಟ, ಜುಮ್ಮಾ ಮಸೀದಿ, ಐತಿಹಾಸಿಕ ಕೋಟೆಗೋಡೆ ಸೇರಿದಂತೆ 82 ಸ್ಮಾರಕಗಳು ಪುರಾತತ್ವ ಇಲಾಖೆಯಿಂದ ಸಂರಕ್ಷಿತ ಸ್ಮಾರಕಗಳೆಂದು ಘೋಷಣೆಯಾಗಿವೆ. ಇವುಗಳಲ್ಲಿ ಕೆಲವೇ ಕೆಲವು ಸ್ಮಾರಕಗಳು ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಸಂರಕ್ಷಣೆಯಾಗಿವೆ.

ಆದರೆ ಬಹುತೇಕ ಸ್ಮಾರಕಗಳ ಮುಂದೆ ‘ಸಂರಕ್ಷಿತ ಸ್ಮಾರಕ, ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ, ಹಾಗೂ ಅವಶೇಷಗಳ ಅಧಿನಿಯಮ 1958ರ ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ಯಾರಾದರೂ ಇದನ್ನು ನಾಶಪಡಿಸಿದರೆ, ಸ್ಥಳಾಂತರಗೊಳಿಸಿದರೆ, ಹಾನಿಯುಂಟು ಮಾಡಿದರೆ, ಬದಲಿಸಿದರೆ, ವಿಕೃತಗೊಳಿಸಿದರೆ, ಗಂಡಾಂತರಗೊಳಿಸಿದರೆ, ದುರುಪಯೋಗಪಡಿಸಿಕೊಂಡರೆ ಜೈಲುಶಿಕ್ಷೆ ಹಾಗೂ ಲಕ್ಷ ರೂ.ದಂಡ ವಿಧಿಸಲಾಗುತ್ತದೆ’ ಎಂಬ ಫಲಕ ಹಾಕಲಾಗಿದೆ.

ಆದರೆ ಫಲಕದಲ್ಲಿರುವ ಸೂಚನೆಗೂ, ಸ್ಮಾರಕಗಳ ಇಂದಿಗೂ ಸ್ಥಿತಿಗೂ ಸಂಬಂಧವೇ ಇಲ್ಲದಂತೆ ಸ್ಮಾರಕಗಳನ್ನು ಹಾಳು ಮಾಡಲು ಏನೇನು ಆಗಬೇಕೋ ಅದೆಲ್ಲವೂ ಆಗಿದೆ. ಸಂರಕ್ಷಣೆಗೆ ಸಿಬ್ಬಂದಿಯೇ ಇಲ್ಲ ಸ್ಮಾರಕಗಳ ಸಂರಕ್ಷಣೆ ಜವಾಬ್ದಾರಿ ಹೊತ್ತ ಪುರಾತತ್ವ ಇಲಾಖೆಗೆ ಕೆಲವು ಸ್ಮಾರಕಗಳನ್ನು ಸಂರಕ್ಷಿಸಲು ಸಾಧ್ಯವಾಗಿದೆ. ಅನೇಕ ಸ್ಮಾರಕಗಳ ಸಂರಕ್ಷಣೆ ಇಲಾಖೆಗೂ ಸಾಧ್ಯವಾಗಿಲ್ಲ.

ಅವು ಎಲ್ಲಿವೆ ಅಂಥಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇತಿಹಾಸದ ಪುಸ್ತಕ ನೋಡಬೇಕಾದ ಅನಿವಾರ್ಯತೆ ಇದೆ. ಕೆಲ ಸ್ಮಾರಕಗಳು ಕೆಲವರ ಸುಪರ್ದಿಯಲ್ಲಿವೆ. ಅವುಗಳು ಸಂರಕ್ಷಿತ ಸ್ಮಾರಕಗಳಿದ್ದರೂ ಅವುಗಳ ನಿರ್ವಹಣೆ, ಸಣ್ಣಪುಟ್ಟ ದುರಸ್ತಿ ಕಾರ್ಯ ಕೈಗೊಳ್ಳುವುದಕ್ಕೆ ಇಲಾಖೆ ಹರಸಾಹಸ ಮಾಡಬೇಕು. ಇನ್ನೂ ಸ್ವಾರಸ್ಯಕರ ಸಂಗತಿಯೆಂದು ನೂರಾರು ಸ್ಮಾರಕಗಳ ಸಂರಕ್ಷಣೆಗೆ ಹತ್ತಾರು ಸಿಬ್ಬಂದಿ ಮಾತ್ರ ಇದ್ದಾರೆ. ಪ್ರಮುಖ ಸ್ಮಾರಕಗಳಿಗೆ ಮಾತ್ರ ಭದ್ರತೆಗಾಗಿ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಸ್ಮಾರಕಗಳ ಸಂರಕ್ಷಣೆ ಯಾಕಾಗುತ್ತಿಲ್ಲ ಎಂದು ಇಲಾಖಾಧಿಕಾರಿಗಳನ್ನು ಕೇಳಿದರೆ, ‘ಏನ್ ಮಾಡ್ಲಿ ಸರ್, ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ತಲಾ ಸ್ಮಾರಕಕ್ಕೆ ಒಬ್ಬ ಸಿಬ್ಬಂದಿಯನ್ನಾದರೂ ನಿಯೋಜಿಸಬೇಕೆಂದರೂ ಸಾಲುವುದಿಲ್ಲ. ಅನೇಕ ವರ್ಷಗಳಿಂದ ಸಿಬ್ಬಂದಿ ನೇಮಕಾತಿ ಆಗಿಲ್ಲ’ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಸ್ಮಾರಕಗಳ ಸಂರಕ್ಷಣೆ, ಭದ್ರತೆಗೆ ಹೊರಗುತ್ತಿಗೆ ಮೇಲಾದರೂ ಭದ್ರತಾ ಸಿಬ್ಬಂದಿ ಒದಗಿಸಬೇಕೆಂದರೂ ನೂರೆಂಟು ಪ್ರಕ್ರಿಯೆ ಆಗಬೇಕಂತೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಅಪೂರ್ವ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ವೇದಿಕೆಗಳಲ್ಲಿ ಭಾಷಣ ಮಾಡಿದ್ದೇ ಸಾಧನೆ. ಗೋಲಗುಮ್ಮಟ, ಇಬ್ರಾಹಿಂ ರೋಜಾಗಳಂಥ ಭವ್ಯ ಸ್ಮಾರಕಗಳ ನಗರಿ ನಮ್ಮದು. ಇಲ್ಲಿನ ಸ್ಮಾರಕಗಳು ಜಗತ್ತಿನ ಗಮನ ಸೆಳೆದಿವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಬ್ದಾರಿ ಎಂದು ದೊಡ್ಡದಾಗಿ ಹೇಳುತ್ತಾರೆ. ಆದರೆ ಸ್ಮಾರಕಗಳ ಸ್ಥಿತಿಗತಿ ಬಗ್ಗೆಯೂ ತಿರುಗಿ ನೋಡುತ್ತಿಲ್ಲ.

ಹೀಗೇ ಆದರೆ ಪರಿಸ್ಥಿತಿ ಮುಂದುವರಿದರೆ ಮುಂದಿನ ಪೀಳಿಗೆಯವರು ‘ವಿಜಯಪುರದಲ್ಲಿ ಸ್ಮಾರಕಗಳು ಎಲ್ಲಿದ್ದವು’ ಎಂದು ಕೇಳಬೇಕಾದ ದುಸ್ಥಿತಿ ಬರುವುದರಲ್ಲಿ ಅನುಮಾನವೇ ಇಲ್ಲ.

ಐತಿಹಾಸಿಕ ಸ್ಥಳಗಳ ರಕ್ಷಣೆ, ಶುಚಿತ್ವ ಕಾಪಾಡುವುದು, ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವುದು, ಅಪಾಯ ಸ್ಥಳಗಳ ಸೂಚನೆ ನೀಡುವುದು, ತ್ಯಾಜ್ಯಗಳ ನಿಯಂತ್ರಣ, ಪ್ರವಾಸಿ ತಾಣಗಳಲ್ಲಿ ಕಳ್ಳರು, ಪುಂಡರು, ಸುಲಿಗೆಕೋರರ ಹಾವಳಿ ತಡೆಯುವುದು. ಅನೈತಿಕ ಚಟುವಟಿಕೆ ತಡೆಗಟ್ಟುವುದು ಅಧಿಕಾರಿಗಳ ಕರ್ತವ್ಯ ಅಲ್ಲಿಯ ಅಧಿಕಾರಿಗಳ ಹೊಣೆ ಆದರೆ ಇಲ್ಲಿ ವಿಜಯಪುರದ ಸ್ಮಾರಕಗಳ ಸಂರಕ್ಷಣೆ ವಿಚಾರದಲ್ಲಿ ಅದು ಸಾಧ್ಯವಿಲ್ಲ.

ಆದರೆ, ಇಲ್ಲಿರುವ ಸ್ಮಾರಕಗಳು, ಪ್ರವಾಸಿ ಸ್ಥಳಗಳಿಗೆ ಸಿಬ್ಬಂದಿ ನೇಮಿಸಬೇಕು ಕೇಂದ್ರ ಸರಕಾರದ ಪುರಾತತ್ವ ಇಲಾಖೆ ಹಾಗೂ ರಾಜ್ಯ ಸರಕಾರ ವಿಜಯಪುರದ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲೇಬೇಕು ಎಂಬುದೇ ನಮ್ಮೆಲ್ಲರ ಆಶಯ. ////ವರದಿ : ರವಿಕುಮಾರ ಮುರಾಳ