ಅಫ್ಘಾನಿಸ್ತಾನದಲ್ಲಿ ಆಹಾರದ ಕೊರತೆ, ರಷ್ಯಾದಿಂದ ಸಹಾಯ

ರಷ್ಯಾ 3 ವಿಮಾನಗಳಲ್ಲಿ ಅಫ್ಘಾನಿಸ್ತಾನಕ್ಕೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.

ವಾಷಿಂಗ್ಟನ್ : ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂಪಡೆದ ಬಳಿಕ ತಾಲಿಬಾನ್ ಉಗ್ರರು ದೇಶದ ಮೇಲೆ ಹಿಡಿತ ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಹೊಸ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿದೆ. ಈ ರಾಜ್ಯವನ್ನು ವಿಶ್ವದ ಯಾವುದೇ ರಾಷ್ಟ್ರಗಳು ಔಪಚಾರಿಕವಾಗಿ ಗುರುತಿಸಿಲ್ಲ. ಈ ಮಧ್ಯೆ ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳು ತಾಲಿಬಾನ್‌ಗೆ ಬೆಂಬಲ ನೀಡುತ್ತಿವೆ.

ಅಕ್ಟೋಬರ್ 20 ರಂದು ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಸಭೆಯಲ್ಲಿ ತಾಲಿಬಾನ್ ನಿಯೋಗವು ಇರಾನ್ ಮತ್ತು ಚೀನಾ ಸೇರಿದಂತೆ ದೇಶಗಳ ಪ್ರತಿನಿಧಿಗಳನ್ನು ಭೇಟಿ ಮಾಡಿತು. ಮಾತುಕತೆಯ ಸಂದರ್ಭದಲ್ಲಿ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಮಾನವೀಯ ದುರಂತವನ್ನು ತಡೆಗಟ್ಟಲು ಅಫ್ಘಾನಿಸ್ತಾನಕ್ಕೆ ಹಣಕಾಸಿನ ನೆರವು ನೀಡುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.

ಅಫ್ಘಾನಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಆಹಾರದ ಕೊರತೆ ಹಿನ್ನೆಲೆಯಲ್ಲಿ ರಷ್ಯಾ ಮಾನವೀಯ ನೆಲೆಯಲ್ಲಿ 3 ವಿಮಾನಗಳಲ್ಲಿ 36 ಟನ್ ತೂಕದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಈ ವಿಮಾನಗಳು ನಿನ್ನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಆಗಮಿಸಿವೆ.