ಬೆಂಗಳೂರು: ಸಿಕ್ಕ ಸಿಕ್ಕವರ ಮೇಲೆ ಮಚ್ಚು, ಲಾಂಗ್ ಬೀಸಿದ್ದ ಪುಂಡರ ಗ್ಯಾಂಗ್ ಅರೆಸ್ಟ್

ಗಣೇಶ ಹಬ್ಬದ ವೇಳೆ ಉತ್ತರಹಳ್ಳಿಯಲ್ಲಿ ಹವಾ ಸೃಷ್ಟಿಸಲು ಮಚ್ಚು, ಚಾಕು ಹಾಗೂ ಡ್ರ್ಯಾಗರ್ ಹಿಡಿದು ದಾಳಿ ನಡೆಸಿದ ಆರೋಪದಡಿ ಮಹಿಳೆ ಸೇರಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (Bengaluru): ಗಣೇಶ ಹಬ್ಬದ ಸಂದರ್ಭದಲ್ಲಿ ಉತ್ತರಹಳ್ಳಿ (Uttarahalli) ಭಾಗದಲ್ಲಿ ಗಲಾಟೆ ಸೃಷ್ಟಿಸಿ ಹವಾ ಮಾಡಲು ಮುಂದಾಗಿದ್ದರೆನ್ನಲಾದ ಗ್ಯಾಂಗ್‌ ಇದೀಗ ಪೊಲೀಸರ ಬಲೆಗೆ ಬಿದ್ದಿದೆ. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಒಟ್ಟು 11 ಮಂದಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ (Attempt to Murder) ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಪೊಲೀಸರ ಪ್ರಕಾರ, ಸೆಪ್ಟೆಂಬರ್ 20ರಂದು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸ್ಯಾಂಡಿ ಎಂಬಾತನನ್ನು ಹುಡುಕಿಕೊಂಡು ಆರೋಪಿಗಳು ಉತ್ತರಹಳ್ಳಿ ಆರ್ಚ್ ಬಳಿಯ ಖಾಲಿ ಜಾಗಕ್ಕೆ ಬಂದಿದ್ದರು.

ಆದರೆ ಸ್ಯಾಂಡಿ ಅಲ್ಲಿ ಸಿಗಲಿಲ್ಲ. ಇದರಿಂದ ಅಲ್ಲಿದ್ದ ಇಬ್ಬರ ಮೇಲೆ ಚಾಕು ಮತ್ತು ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬಳಿಕ ಇದೇ ಗುಂಪಿನ ಕೆಲವರು ಕಿರಣ್ ಎಂಬಾತನ ಮೇಲೂ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಷ್ಟಕ್ಕೆ ನಿಲ್ಲದ ಗ್ಯಾಂಗ್, ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಮೀನು ಅಂಗಡಿಗೆ ತೆರಳಿದೆ. ಅಲ್ಲಿ ಮೀನು ತಿನ್ನಲು ಕುಳಿತಿದ್ದ ರವಿಚಂದ್ರನ್ ಎಂಬಾತನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಂಠಪೂರ್ತಿ ಕುಡಿದು ಹೊಡೆದಾಡಿಕೊಂಡ ಕಾರ್ಮಿಕರು, 8 ಮಂದಿ ಬಂಧನ

ಈ ಸಂಬಂಧ ತನಿಖೆ ಕೈಗೊಂಡ ಸುಬ್ರಹ್ಮಣ್ಯಪುರ ಪೊಲೀಸರು (Subramanyapura Police) ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಿದ್ದಾರೆ. ಬಂಧಿತರಲ್ಲಿ ಪ್ರೇಮ್ ಅಲಿಯಾಸ್ ಚಿನ್ನು (19), ಮಣಿಕಂಠ (27), ಮನೋಜ್ (20), ಕೃಷ್ಣಗುಪ್ತ ಅಲಿಯಾಸ್ ಕುಳ್ಳ (19), ಆಕಾಶ್ ಅಲಿಯಾಸ್ ಮಂಡ್ಯ (23), ಮುನ್ನಾ (29), ಮಧುಸೂದನ್ ಅಲಿಯಾಸ್ ಒಪ್ಪೋ ಮಧು (24), ದರ್ಶನ್ (23) ಮತ್ತು ಸುದೀಪ (25) ಸೇರಿದ್ದಾರೆ. ಇವರಿಗೆ ಆಶ್ರಯ ನೀಡಿದ್ದ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಪ್ರೇಮ್ ಅಲಿಯಾಸ್ ಚಿನ್ನು ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ಯಾಂಗ್ ಕಟ್ಟಿಕೊಂಡು ಪುಂಡಾಟಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆ ಆತನ ವಿರುದ್ಧ ರೌಡಿಶೀಟ್ (Rowdy Sheet) ತೆರೆಯಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಸದ್ಯ ಬಂಧಿತ 11 ಮಂದಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ದಾಳಿಯ ಹಿಂದಿನ ಕಾರಣ, ಗ್ಯಾಂಗ್‌ನಲ್ಲಿದ್ದ ಇತರರ ಪಾತ್ರ ಹಾಗೂ ಇನ್ನಷ್ಟು ಘಟನೆಗಳಲ್ಲಿ ಇವರ ಕೈವಾಡ ಇದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories