ದುಬೈ to ಬೆಂಗಳೂರು ವಿಮಾನ ಸೇವೆ, 3 ದಿನಗಳಲ್ಲಿ 1,500 ಮಂದಿ ಸುರಕ್ಷಿತ ಆಗಮನ
ಇಸ್ರೇಲ್–ಇರಾನ್ ಯುದ್ಧದ ಪರಿಣಾಮದಿಂದ ಮಧ್ಯಪ್ರಾಚ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಿಲುಕಿದ್ದರು. ಕಳೆದ ಮೂರು ದಿನಗಳಲ್ಲಿ ದುಬೈ ಮತ್ತು ಅಬುಧಾಬಿಯಿಂದ ಐದು ವಿಮಾನಗಳ ಮೂಲಕ ಸುಮಾರು 1,500 ಮಂದಿ ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿದ್ದಾರೆ.

- ದುಬೈನಿಂದ ಬೆಂಗಳೂರಿಗೆ 5ನೇ ವಿಮಾನ
- 246 ಪ್ರಯಾಣಿಕರು ವಾಪಸ್ಸು
- 3 ದಿನಗಳಲ್ಲಿ 1,500 ಮಂದಿ ಸುರಕ್ಷಿತ ಆಗಮನ
ಬೆಂಗಳೂರು (Bengaluru): ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿ ಹಲವಾರು ಪ್ರಯಾಣಿಕರ ಯೋಜನೆಗಳನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿದೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ದುಬೈ, ಅಬುಧಾಬಿ, ಜೆದ್ದಾ ಮತ್ತು ದೋಹಾ ಸೇರಿದಂತೆ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರು ಏರ್ಪೋರ್ಟ್ಗಳಲ್ಲಿ ಸಿಲುಕಿಕೊಂಡಿದ್ದರು.
ಈ ಪರಿಸ್ಥಿತಿಯಲ್ಲಿ ಸಿಲುಕಿದ್ದ ಭಾರತೀಯರು ಮತ್ತು ಕನ್ನಡಿಗರನ್ನು ಸುರಕ್ಷಿತವಾಗಿ ತವರಿಗೆ ಕರೆತರಲು ವಿಮಾನ ಸೇವೆಗಳು ಕ್ರಮೇಣ ಆರಂಭಗೊಂಡಿವೆ. ಕಳೆದ ಮೂರು ದಿನಗಳಿಂದ ದುಬೈ ಮತ್ತು ಅಬುಧಾಬಿಯಿಂದ ದಿನಕ್ಕೆ ಒಂದು ಅಥವಾ ಎರಡು ವಿಮಾನಗಳು ಬೆಂಗಳೂರಿಗೆ ಬರುತ್ತಿದ್ದು, ಈಗಾಗಲೇ ಸುಮಾರು 1,500 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ.
ಇತ್ತೀಚೆಗೆ ಬಂದ ಐದನೇ ವಿಮಾನದಲ್ಲಿ 246 ಮಂದಿ ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದರು. ಈ ವಿಮಾನವು ಬುಧವಾರ ಸಂಜೆ ಸುಮಾರು 7 ಗಂಟೆಗೆ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ತವರಿಗೆ ಬಂದ ಪ್ರಯಾಣಿಕರು ನಿರಾಳ ನಿಟ್ಟುಸಿರು ಬಿಟ್ಟರು.
ಕೆಲವರು ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದರೆ, ಇನ್ನೂ ಕೆಲವರು ಕೆಲಸ ಅಥವಾ ಹನಿಮೂನ್ ಪ್ರಯಾಣದಲ್ಲಿದ್ದರು. ಯುದ್ಧ ಪರಿಸ್ಥಿತಿಯಿಂದ ಹಲವು ವಿಮಾನಗಳು ರದ್ದಾಗಿದ್ದರಿಂದ ಅವರು ತಕ್ಷಣವೇ ಭಾರತಕ್ಕೆ ಮರಳಬೇಕಾದ ಪರಿಸ್ಥಿತಿ ಎದುರಾಯಿತು. ಒಬ್ಬ ಮಹಿಳೆ ಅಮೆರಿಕಗೆ ತೆರಳಲು ಯೋಜಿಸಿದ್ದರೂ, ಫ್ಲೈಟ್ ರದ್ದು ಆಗಿದ್ದರಿಂದ ದುಬೈನಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಬೆಂಗಳೂರಿಗೆ ಮರಳುವ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ಇನ್ನೂ ಕೆಲವರು ಅಮೆರಿಕದಿಂದ ದುಬೈಗೆ ಬಂದು ಎರಡು ದಿನಗಳ ಪ್ರವಾಸ ಮುಗಿಸಿ ಮುಂದಿನ ಪ್ರಯಾಣಕ್ಕೆ ಸಿದ್ಧರಾಗಿದ್ದರೂ ಪರಿಸ್ಥಿತಿ ಬದಲಾಗಿದ್ದರಿಂದ ತವರಿಗೆ ಹಿಂದಿರುಗಿದ್ದಾರೆ.
ಕಳೆದ ಸೋಮವಾರ ರಾತ್ರಿ ಮೊದಲ ವಿಮಾನದಲ್ಲಿ 213 ಮಂದಿ ಬಂದಿದ್ದರೆ, ಮಂಗಳವಾರ ಮುಂಜಾನೆ ಬಂದ ಎರಡನೇ ವಿಮಾನದಲ್ಲಿ 490 ಮಂದಿ ಪ್ರಯಾಣಿಕರು ಆಗಮಿಸಿದರು. ಅದೇ ದಿನ ಸಂಜೆ 350 ಮಂದಿ ಬಂದಿದ್ದು, ನಂತರ ಮಧ್ಯರಾತ್ರಿ 200 ಮಂದಿ ಮತ್ತೊಂದು ವಿಮಾನದಲ್ಲಿ ತಲುಪಿದರು. ಬುಧವಾರ ಸಂಜೆ ಬಂದ ಐದನೇ ವಿಮಾನದಲ್ಲಿ 246 ಮಂದಿ ವಾಪಸ್ಸಾಗಿದ್ದು ಒಟ್ಟು ಸಂಖ್ಯೆಯು 1,500ಕ್ಕೆ ತಲುಪಿದೆ.
ಆದರೆ ದುಬೈ ಮತ್ತು ಅಬುಧಾಬಿಯಿಂದ ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿಮಾನಗಳು ಸಂಚರಿಸುತ್ತಿರುವುದರಿಂದ ಇನ್ನೂ ಅನೇಕ ಕನ್ನಡಿಗರು ಅಲ್ಲಿನ ಏರ್ಪೋರ್ಟ್ಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಪರಿಸ್ಥಿತಿ ಸಾಮಾನ್ಯವಾದ ಬಳಿಕ ಹೆಚ್ಚಿನ ವಿಮಾನ ಸೇವೆಗಳನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



