Bengaluru: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಮೂವರು ವಿದ್ಯಾರ್ಥಿಗಳು ಸಾವು

ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಅಗಲಕೋಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ವರದಿಯಾಗಿದೆ.

  • ದೇವನಹಳ್ಳಿ ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವು
  • ಅಗಲಕೋಟೆ ಕ್ರಾಸ್ ಬಳಿ ಬೈಕ್ ಡಿವೈಡರ್ ಹಾಗೂ ಲಾರಿಗೆ ಡಿಕ್ಕಿ
  • ಮೃತ ವಿದ್ಯಾರ್ಥಿಗಳ ಕುಟುಂಬದಲ್ಲಿ ಆಘಾತ

ಬೆಂಗಳೂರು (Bengaluru): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devalahalli Accident) ತಾಲೂಕಿನ ಅಗಲಕೋಟೆ ಕ್ರಾಸ್ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಮೂವರು ಯುವ ಜೀವಗಳನ್ನು ಕಿತ್ತುಕೊಂಡಿದೆ. ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶನಿವಾರ ವೀಕೆಂಡ್ ಹಿನ್ನೆಲೆ ಲಾಂಗ್ ಡ್ರೈವ್‌ಗೆ ಹೊರಟಿದ್ದ ಸ್ನೇಹಿತರ ಪಯಣ ದುರಂತ ಅಂತ್ಯ ಕಂಡಿದೆ. ಬೆಳಿಗ್ಗೆ ಸುಮಾರು 11:20ರ ವೇಳೆಗೆ ಅಗಲಕೋಟೆ ಕ್ರಾಸ್ ಬಳಿ ಬೈಕ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಎದುರಿನಿಂದ ಬರುತ್ತಿದ್ದ ಲಾರಿಗೆ ಬೈಕ್ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರ ವಿವರ

ಅಪಘಾತದಲ್ಲಿ ಮೃತಪಟ್ಟವರು ಪಿಯುಸಿ ವಿದ್ಯಾರ್ಥಿಗಳಾದ ತೌಸೀಪ್, ಶ್ರೀನಿವಾಸ್ ಮತ್ತು ಮಣಿಕಂಠ ಎಂದು ಗುರುತಿಸಲಾಗಿದೆ. ಇವರು ಚಿಕ್ಕಜಾಲ ಹಾಗೂ ಹುಣಸಮಾರನಹಳ್ಳಿ ಪ್ರದೇಶದ ನಿವಾಸಿಗಳಾಗಿದ್ದು, ಹುಣಸಮಾರನಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದು, ಮಕ್ಕಳ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದಾರೆ. ಸ್ಥಳದಲ್ಲಿ ಮನಕಲಕುವ ದೃಶ್ಯ ಕಂಡುಬಂದಿದೆ.

ಈ ಕುರಿತು ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದ ನಿಖರ ಕಾರಣ ಪತ್ತೆಗೆ ತನಿಖೆ ಮುಂದುವರಿದಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories